ಸೋಮವಾರಪೇಟೆ, ಏ. 4: ಸದೃಢ, ಸ್ವಾಭಿಮಾನಿ, ಅಭಿವೃದ್ಧಿ, ಸಶಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೋರ್ವರೂ ಮತ ಚಲಾಯಿಸಬೇಕು. ಶೇ. 100 ರಷ್ಟು ಮತದಾನಕ್ಕೆ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ ಪ್ರಾಂತ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರುಳಾಪುರ ಹೇಳಿದರು.
ಸಮರ್ಥ ಭಾರತ ಆಶ್ರಯದಲ್ಲಿ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ‘ಭಾರತ ಪರಿವರ್ತನಾ-ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ 2014 ರಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ವಿಸ್ತøತವಾಗಿ ವಿವರಿಸಿದ ಸ್ವಾಮಿ ಮರುಳಾಪುರ ಅವರು, ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರಗಳ ಸರಮಾಲೆಗಳೇ ನಡೆದಿದ್ದರೆ, ಈಗಿನ ಸರ್ಕಾರದಲ್ಲಿ ಭ್ರಷ್ಟಾಚಾರದ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ ಎಂದು ಅಭಿಪ್ರಾಯಿಸಿದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಎಲ್ಲಾ ಕ್ಷೇತ್ರದಲ್ಲೂ ಸುಧಾರಣೆ ಕಾಣುತ್ತಿದೆ. ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗುವತ್ತ ಹೆಜ್ಜೆ ಹಾಕುತ್ತಿದೆ. ಶಿಕ್ಷಣ, ಅಭಿವೃದ್ಧಿ, ಮೂಲಭೂತ ಸೌಕರ್ಯ, ನ್ಯಾಯಾಂಗ, ಆಡಳಿತ, ಪೊಲೀಸ್, ಸೈನಿಕ ಕ್ಷೇತ್ರದಲ್ಲೂ ಬದಲಾವಣೆ ಕಾಣುವಂತಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ದೇಶದ ಸಮಗ್ರತೆಗೆ ಧಕ್ಕೆ ತರುವಂತದ್ದಾಗಿದೆ. ದೇಶದ ರಕ್ಷಣೆಗೆ ವಿರುದ್ಧವಾಗಿದೆ. ದೇಶವನ್ನು ತುಂಡರಿಸುವ ಇಂತಹ ಮನೋಸ್ಥಿತಿಯನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರ ಒಂದು ಓಟು ಭಯೋತ್ಪಾದನೆ, ಕುಟುಂಬ ರಾಜಕಾರಣ, ನಕ್ಸಲಿಸಂ, ಭ್ರಷ್ಟಾಚಾರ, ನುಸುಳುಕೋರರಿಗೆ ನೀಡುವ ಪೆಟ್ಟಾಗಬೇಕು. ಅಂತೆಯೇ ಸೈನಿಕರ ಆತ್ಮಸ್ಥೈರ್ಯ ವೃದ್ಧಿಸುವ, ಮಹಿಳಾ ಸುರಕ್ಷೆ, ದೇಶ ರಕ್ಷಣೆ, ಆರೋಗ್ಯ ಸುಧಾರಣೆ, ಡಿಜಿಟಲ್ ಇಂಡಿಯಾ, ಸಶಕ್ತ, ಸಮೃದ್ಧಿ, ಸ್ವಾಭಿಮಾನ ಭಾರತ ನಿರ್ಮಾಣಕ್ಕೆ ಅಡಿಗಲ್ಲಾಗಬೇಕು. ಜಾತಿ, ಮತ, ಪಂಥ ಮೀರಿ ದೇಶಕ್ಕಾಗಿ ಈ ಬಾರಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಸ್ವಾಮಿ ಮರುಳಾಪುರ ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮರ್ಥ ಭಾರತದ ಸಂಚಾಲಕ ಡಾ. ಬಿ.ಸಿ. ನವೀನ್ಕುಮಾರ್ ಅವರು, ಚುನಾವಣೆಗಳಲ್ಲಿ ಮತ ಚಲಾಯಿಸುವವನು ಮಾತ್ರ ಪ್ರಜಾಪ್ರಭುತ್ವದಲ್ಲಿ ಪ್ರಭುವಾಗಲು ಅರ್ಹತೆ ಪಡೆಯುತ್ತಾನೆ. ಸಂವಿಧಾನದ ನಾಲ್ಕು ರಂಗಗಳೊಂದಿಗೆ ಜನತಾರಂಗ ಜಾಗೃತವಾಗಿದ್ದರೆ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯವಾಗುತ್ತದೆ ಎಂದರು.
ರಾಜನೀತಿ, ಪ್ರಜಾನೀತಿ ಮತ್ತು ಧರ್ಮ ನೀತಿಗಳನ್ನು ಅಳವಡಿಸಿಕೊಂಡಿರುವ ಪಕ್ಷಗಳಿಂದ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ ಎಂದರು.
ಕಾರ್ಯಕ್ರಮದ ನಂತರ ಪ್ರಮುಖರೊಂದಿಗೆ ದೇಶದ ಬೆಳವಣಿಗೆಗಳ ಬಗ್ಗೆ ಸಂವಾದ ನಡೆಯಿತು. ವಿವಿಧ ಕ್ಷೇತ್ರಗಳ ಮುಖಂಡರು ಭಾಗವಹಿಸಿದ್ದರು. ಆರ್ಎಸ್ಎಸ್ ತಾಲೂಕು ಕಾರ್ಯವಾಹ ಪದ್ಮನಾಭ್ ಕಾರ್ಯಕ್ರಮ ನಿರ್ವಹಿಸಿದರು.