ಒಡೆಯನಪುರ, ಏ. 4: ಸಮೀಪದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಗುರುಸಿದ್ಧ ಸ್ವಾಮಿ ವಿದ್ಯಾಪೀಠದಲ್ಲಿ ನಡೆದಾಡುವ ದೇವರು; ಕರ್ನಾಟಕ ರತ್ನ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ 112ನೇ ಜಯಂತಿ ಮತ್ತು ಗುರುನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಯಿತು. ವಿದ್ಯಾಪೀಠ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಎಸ್ಎಸ್ಕೆ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ ಕಿರಿಕೊಡ್ಲಿ ಮಠದೀಶರಾದ ಸದಾಶಿವಸ್ವಾಮೀಜಿ ಅವರು ಸಿದ್ಧಗಂಗಾ ಸ್ವಾಮಿಜಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಏಪ್ರಿಲ್ 1ನೇ ದಿನಾಂಕವನ್ನು ಜಗತ್ತಿನ ದೇಶಗಳಲ್ಲಿ ಮೂರ್ಖರ ದಿನವಾಗಿ ಆಚರಿಸಿದರೆ ಕರ್ನಾಟಕದ ಜನತೆ ಅಂದು ಪವಿತ್ರದಿನ ಅಥವಾ ವಿವಿಧ ದಾಸೋಹ ದಿನವಾಗಿ ಆಚರಿಸುತ್ತಾರೆ. ಇದಕ್ಕೆ ಕಾರಣ ನಡೆದಾಡುವ ದೇವರಾಗಿದ್ದ ಸಿದ್ಧಗಂಗಾ ಶ್ರೀಗಳ ಜನ್ಮ ದಿನವಾಗಿದೆ ಎಂದರು. ಸಿದ್ಧಗಂಗಾ ಶ್ರೀಗಳು ಸಮಾಜದ ದೀನ ದಲಿತರ, ಬಡವರ್ಗದವರ ಶಿಕ್ಷಣಕ್ಕಾಗಿ ನೂರು ವರ್ಷಗಳ ಹಿಂದೆಯೇ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭ ಮಾಡಿ ಜಾತಿ, ಮತ, ಬೇಧ, ಬಾವವಿಲ್ಲದೆ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನದ ಆಶ್ರಯ ಕೊಟ್ಟು ಸಲಹಿದ್ದಾರೆ ಎಂದರು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭ ಮಾಡಿ ಗ್ರಾಮೀಣ ಬಡ ಜನರ ವಿದ್ಯಾರ್ಥಿಗಳಿಗೆ ಸಿದ್ಧಗಂಗಾ ಶ್ರೀಗಳು ಆಶ್ರಯದಾತರಾದರು, ಇಂತಹ ಮಹಾನ್ ಶ್ರೀಗಳು 111 ವರ್ಷ ತುಂಬು ಜೀವನ ನಡೆಸಿ ಜಗತ್ತಿನ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದರು. ತಮ್ಮ ಜೀವಿತ ಅವಧಿಯಲ್ಲಿ ಸಂಪೂರ್ಣ ಕಾಲವನ್ನು ಸಮಾಜದ ಒಳಿತಿಗಾಗಿ ಮೀಸಲಿಟ್ಟು ಬದುಕಿ ದವರು ಇಂಥಹವರ ಜಯಂತಿ ಆಚರಣೆ ನಮ್ಮ ನಿಮ್ಮೆಲ್ಲರ ಸೌಭಾಗ್ಯವಾಗಿದೆ, ಈ ನಿಟ್ಟಿನಲ್ಲಿ ಸಿದ್ಧ ಗಂಗಾ ಶ್ರೀಗಳು ಜನಿಸಿದ ದಿನವನ್ನು ಗುರುನಮನ ಕಾರ್ಯ ಕ್ರಮವಾಗಿ ಆಚರಿಸಲಾಗುತ್ತಿದೆ, ಶ್ರೀಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಸಮಾಜವನ್ನು ಮುನ್ನಡೆಸಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಪಿ. ನಂಜುಂಡಯ್ಯ, ಪ್ರಾಂಶುಪಾಲೆ ಕೆ.ಎಸ್. ತನುಜ ವಿದ್ಯಾಸಂಸ್ಥೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೋಮವಾರಪೇಟೆ: ಇಲ್ಲಿಗೆ ಸಮೀಪದ ಕಾಟೀಕೊಪ್ಪ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಾಲಯ ದಲ್ಲಿ ಸಿದ್ದಗಂಗಾ ಮಠದ ಹಿರಿಯ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿಗಳ 112ನೇ ಜನ್ಮದಿನಾಚರಣೆ ಆಚರಿಸಲಾಯಿತು. ಗ್ರಾಮಸ್ಥರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗುರು ನಮನ ಸಲ್ಲಿಸಿದರು. ಗ್ರಾಮದ ಪ್ರಮುಖರಾದ ಬಸವರಾಜು, ಕಾರ್ತಿಕ್, ಕುಮಾರ್, ಶಾಂತರಾಜು, ವೈ.ಎಂ. ಬಸವರಾಜ್, ಸೋಮ ಶೇಖರ್, ತುಷಾರ್, ಮಂಜು ನಾಥ್, ಧರ್ಮ ಹಾಜರಿದ್ದರು.
-ವಿ.ಸಿ.ಸುರೇಶ್ ಒಡೆಯನಪುರ, ವಿಜಯ್ ಹಾನಗಲ್ ಕುಶಾಲನಗರ: ಸಿದ್ಧಗಂಗಾ ಶ್ರೀ ಭಕ್ತ ಮಂಡಳಿ ವತಿಯಿಂದ ಸಿದ್ಧಗಂಗಾ ಶ್ರೀಗಳ 112ನೇ ವರ್ಷದ ಹುಟ್ಟುಹಬ್ಬ ಆಚರಣೆ ಹಮ್ಮಿಕೊಳ್ಳಲಾಯಿತು.
ಪಟ್ಟಣದ ಸೋಮೇಶ್ವರ ದೇವಾಲಯದ ಆವರಣದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣದ ಭಕ್ತರು ಪಾಲ್ಗೊಂಡು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದರು. ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಭಟ್ ನೇತೃತ್ವದಲ್ಲಿ ಅರ್ಚಕರಾದ ಲಕ್ಷ್ಮೀಕಾಂತ್ ಹಾಗೂ ಮಂಜು ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಸಿದ್ಧಗಂಗಾ ಶ್ರೀ ಭಕ್ತ ಮಂಡಳಿ ಸಂಚಾಲಕ ಕೆ.ಎಸ್. ಮೂರ್ತಿ, ವಿಶ್ವ ಕಂಡಂತಹ ಶ್ರೇಷ್ಠ ಸಂತ ನಡೆದಾಡುವ ದೇವರ 112ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಶ್ರೀಗಳ ಸ್ಮರಣೆ ಮಾಡಲಾಗುತ್ತಿದೆ ಎಂದರು. ಶಿವಕುಮಾರ ಸ್ವಾಮೀಜಿ ಸಾರಿದ ಆದರ್ಶಗಳನ್ನು ಭಕ್ತಾದಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಬೇಕೆಂದು ದೇವಾಲಯ ಪ್ರಧಾನ ಅರ್ಚಕ ಮಂಜುನಾಥ್ ಭಟ್ ಹೇಳಿದರು. ಈ ಸಂದರ್ಭ ಸೋಮೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಕೆ. ದಿನೇಶ್, ಕುಶಾಲನಗರ ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್. ಶಿವಾನಂದ, ಮುತ್ತಪ್ಪ ದೇವಾಲಯದ ಸ್ಥಾಪಕ ಅಧ್ಯಕ್ಷ ಕೆ.ಕೆ. ದಿನೇಶ್ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಚಿತ್ರಕಲಾ ರಾಜೇಶ್, ನಿವೃತ್ತ ಎಸ್ಐ ದೇವಯ್ಯ, ನಾಗರತ್ನ ರಂಗಸ್ವಾಮಿ, ತಮ್ಮಯ್ಯ, ನಾಣಯ್ಯ, ಮುತ್ತಪ್ಪ, ಬಿ. ನಟರಾಜು, ಬಿ.ಬಿ. ಲೋಕೇಶ್, ಪೊರೆಯನ ರಮೇಶ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್, ನಿವೃತ್ತ ಯೋಧ ಬಸಪ್ಪ ಮತ್ತಿತರರು ಇದ್ದರು.
ಆಲೂರು-ಸಿದ್ದಾಪುರ: ಮಾಲಂಬಿ ವಿರಶೈವ ಮಹಿಳಾ ಹಾಗೂ ಪುರುಷ ಸಮಾಜದ ವತಿಯಿಂದ ಡಾ. ಶಿವಕುಮಾರ ಸ್ವಾಮೀಜಿಯವರ 112ನೇ ಜನ್ಮ ದಿನಾಚರಣೆಯನ್ನು ಮಾಲಂಬಿಯಲ್ಲಿ ಆಚರಿಸಲಾಯೀತು. ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಲಕ ಆಚರಿಸಿದರು. ಮಾಲಂಬಿ ವೀರಶೈವ ಸಮಾಜದ ಅಧ್ಯಕ್ಷ ಮಲ್ಲೇಶ್, ಕಾರ್ಯದರ್ಶಿ ಈರಪ್ಪ (ವಿರೂಪಾಕ್ಷ), ಮಹಿಳಾ ಸಂಘದ ಅಧ್ಯಕ್ಷೆ ಪ್ರಮೀಳ, ಕಾರ್ಯದರ್ಶಿ ಸರೀತ, ಸಂಘದ ಸದಸ್ಯರು, ಗ್ರಾಮಸ್ಥರು ದೇವಾಲಯದ ಅರ್ಚಕ ಚಂದ್ರಪ್ಪ ಮುಂತಾದವರು ಹಾಜರಿದ್ದರು. ಈ ಪ್ರಯುಕ್ತ ಪ್ರಸಾದ ವಿನಿಯೋಗ ಮಾಡಲಾಯಿತು.