ವೀರಾಜಪೇಟೆ, ಏ. 4: ಪ್ರಕೃತಿಯ ಮಡಿಲಿನಲ್ಲಿ ಲೀನವಾಗಿ ತನ್ನ ಬಳಿಗೆ ಆಗಮಿಸುವ ಭಕ್ತರಿಗೆ ಅಭಯಹಸ್ತ ನೀಡುವ ಕಾನನದ ದೇವಿ ಎಂದು ಪ್ರಖ್ಯಾತಿವೆತ್ತ ಪನ್ನೀಮೆ ದೇವಿಯ ವಾರ್ಷಿಕ ಮಹೋತ್ಸವ ಪರಿಪೂರ್ಣಗೊಂಡಿತ್ತು.
ವೀರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೆಕೇರಿ-ಪರಂದಾಣೆ ಗ್ರಾಮದಲ್ಲಿ ಗ್ರಾಮ ದೇವತೆಯಾದ ಶ್ರೀ ಪನ್ನೀಮೆ ದೇವಿಯ ವಾರ್ಷಿಕ ಮಹೋತ್ಸವ ಮಾ. 30 ರಿಂದ ಆರಂಭಗೊಂಡಿತ್ತು. ದೇಗುಲಕ್ಕೆ 200 ವರ್ಷಗಳ ಇತಿಹಾಸವಿದ್ದು, ವೀರಾಜಪೇಟೆ ಮಲೆತಿರಿಕೆ ಬೆಟ್ಟದ ಶ್ರೀ ಮಹಾದೇವರ ವಾರ್ಷಿಕ ಉತ್ಸವ ಜರುಗಿದ ನಂತರ ಮಾರ್ಚ್ ತಿಂಗಳ ಕೊನೆಯ ಶನಿವಾರದಿಂದ ಆರಂಭವಾಗುವ ಉತ್ಸವ ಸೋಮವಾರದಂದು ಕೊನೆಗೊಳ್ಳುತ್ತದೆ. ದೇಗುಲಕ್ಕೆ 200 ವರ್ಷಗಳ ಇತಿಹಾಸವಿದ್ದು ಊರಿನ ಪ್ರಮುಖ ಕುಟುಂಬಗಳಾದ ತಂಬ ಕುಟ್ಟಡ,ತಾತಿ ಕುಟ್ಟಡ,ಬಣ್ಣ ಕುಟ್ಟಡ ಕೋಪೇರಿ ಮತ್ತು ದೊಣ ಕುಟ್ಟಡ ಕುಟುಂಬಸ್ಥರು ದೇವಾಲಯದ ಉತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಪ್ರಥಮ ದಿನ ಊರಿನ ಕೆರೆಯಲ್ಲಿ ದೇವಿಯ ಜಳಕದ ಬಳಿಕ ಐದು ಕಲಶದೊಂದಿಗೆ ದೇವಾಲಯಕ್ಕೆ ಆಗಮಿಸಿ ಮಾಹಾ ಪೂಜೆ ಸಲ್ಲಿಸಲಾಗುತ್ತದೆ. ಅಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ಮರು ದಿನ ಉತ್ಸವದ ವಿಶೇಷ ದಿನವಾದ ರವಿವಾರ ಶ್ರೀ ದೇವಿಯು ಅಯ್ಯಪ್ಪ ಮತ್ತು ಇತರ ದೇವರುಗಳೊಂದಿಗೆ ದೇವರ ನೃತ್ಯ ಬಲಿ ಜರುಗಿತು. ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸಂಜೆಯ ವೇಳೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವದು ಮತ್ತು ಇತರ ದೇವತಾ ಕಾರ್ಯ ಜರುಗಿತು.
ದೇಗುಲದ ಪ್ರಮುಖರಾದ ಬೆಳ್ಯಪ್ಪ, ಸುಬ್ರಮಣಿ, ರಾಜಪ್ಪ ಹಾಗೂ ಗ್ರಾಮದ ಹಿರಿಯರು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಉತ್ಸವದಲ್ಲಿ ಭಾಗಿಗಳಾಗಿ ಶ್ರೀ ದೇವಿಯ ಅನುಗ್ರಹ ಪಡೆದರು.