ನಾಳೆಯಿಂದ ಯುವ ಕಾಂಗ್ರೆಸ್, ಜೆಡಿಎಸ್‍ನಿಂದ

ಜಂಟಿ ವಾಹನ ಜಾಥಾ

ಮಡಿಕೇರಿ, ಏ. 3: ಭಾರತೀಯ ಯುವ ಕಾಂಗ್ರೆಸ್ ಮತ್ತು ಯುವ ಜನತಾ ದಳದ ಜಿಲ್ಲಾ ಘಟಕಗಳ ವತಿಯಿಂದ ತಾ. 5 ರಿಂದ 8 ರವರೆಗೆ ‘ಮೋದಿ ಯುವಜನ ವಿರೋಧಿ’ ಎಂಬ ಘೋಷವಾಕ್ಯದಡಿ ಜಿಲ್ಲೆಯಾದ್ಯಂತ ಜಂಟಿ ವಾಹನ ಪ್ರಚಾರ ಜಾಥಾ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್, ಸಂಪಾಜೆ ಹಾಗೂ ಯುವ ಜನತಾದಳ ಅಧ್ಯಕ್ಷ ಸಿ.ಎಲ್. ವಿಶ್ವ ಅವರುಗಳು, ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ಎರಡು ಕೋಟಿ ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ಧಿ, ಸ್ವ ಉದ್ಯೋಗಕ್ಕೆ ಬೆಂಬಲ ಸೇರಿದಂತೆ ಯುವಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿ ಅಧಿಕಾರಕ್ಕೇರಿದ ಮೋದಿ ಕಳೆದ ಐದು ವರ್ಷಗಳಲ್ಲಿ ಯಾವದನ್ನೂ ಈಡೇರಿಸದೆ ಯುವಜನರನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿಗೆ ಬದಲಾಗಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ದೇಶದಲ್ಲಿ ಉದ್ಯೋಗ ನಾಶ ವಾಗಿದ್ದು, ನೋಟು ಅಮಾನ್ಯೀಕರಣ ದಿಂದ ಲಕ್ಷಾಂತರ ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು ನಾಶವಾಗಿ ದೊಡ್ಡ ಸಂಖ್ಯೆಯ ಯುವಜನರು ಬೀದಿಗೆ ಬಿದ್ದಿದ್ದಾರೆ. ಉದ್ಯೋಗ ಸೃಷ್ಟಿಗೆ ಬದಲಾಗಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಾಶವಾಗಿದೆ ಎಂದು ದೂರಿದರು.

ದೇಶದ 62 ಕೋಟಿ ಯುವಜನರ ಪೈಕಿ ಹೆಚ್ಚಿನವರು ಕೃಷಿ ವಲಯವನ್ನೇ ಅವಲಂಬಿಸಿದ್ದು, ಕೃಷಿ ವಲಯದ ಕುಸಿತ ಮತ್ತು ಬಿಕ್ಕಟ್ಟು ನಿರುದ್ಯೋಗದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಬೇರೆಬೇರೆ ಉದ್ಯೋಗಗಳ ನೇಮಕಾತಿಗಳ ಪ್ರಮಾಣ ಕಡಿಮೆಯಾಗುತ್ತಾ ಬಂದಿದ್ದು, ಇದರಿಂದಾಗಿ ಉದ್ಯೋಗ ಪಡೆಯುವವರಿಗಿಂತ ಉದ್ಯೋಗ ನಿವೃತ್ತಿ ಪಡೆಯುತ್ತಿ ರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳಿದರು.

ತಾ. 5 ರಂದು ಪೂರ್ವಾಹ್ನ 10.30 ಗಂಟೆಗೆ ಮಡಿಕೇರಿಯ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಜಾಥಾ ಉದ್ಘಾಟನೆಗೊಳ್ಳಲಿದ್ದು, ತಾ. 8 ರಂದು ಸಂಜೆ 4 ಗಂಟೆಗೆ ವೀರಾಜಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾರೋಪ ಗೊಳ್ಳಲಿದೆ.

ಯುವ ಜನತಾದಳ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿ, ಕೊಡಗು ಜಿಲ್ಲೆಯ ಕಾಡಾನೆ ಹಾವಳಿ, ಕಸ್ತೂರಿ ರಂಗನ್ ವರದಿ ಜಾರಿ, ಕಾಫಿ-ಕರಿಮೆಣಸು ಬೆಲೆ ಕುಸಿತ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳು ಇನ್ನೂ ಹಾಗೆಯೇ ಉಳಿದಿವೆ. ಆದರೂ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದ ಪ್ರತಾಪ್‍ಸಿಂಹ ಅವರು ಯಾವದೇ ರೀತಿಯಲ್ಲಿ ಸ್ಪಂದಿಸಿಲ್ಲ, ಜನಸಾಮಾನ್ಯರ ಕಷ್ಟಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿಲ್ಲ. ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ದೇಶದ ಪ್ರಧಾನಿ ಆಗಮಿಸಿ ನೊಂದವರಿಗೆ ಸಾಂತ್ವನ ಹೇಳುವ ಕಾಳಜಿ ತೋರಿಲ್ಲ ಎಂದು ಆರೋಪಿಸಿದರು.

ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೊಡಗಿಗೆ ಏಳು ಬಾರಿ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬುವದರೊಂದಿಗೆ ಮನೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲು ಕ್ರಮ ಕೈಗೊಂಡಿದ್ದಾರೆ. ಕೊಡಗಿನ ಹಲವು ದಶಕಗಳ ಬೇಡಿಕೆಯಾದ ಪೊನ್ನಂಪೇಟೆ ಹಾಗೂ ಕಾವೇರಿ ತಾಲೂಕು ಗಳನ್ನು ಘೋಷಿಸುವ ಮೂಲಕ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದು ವಿಶ್ವ ಹೇಳಿದರು.

ಯುವ ಕಾಂಗ್ರೆಸ್ ಪ್ರಮುಖರಾದ ಜಮ್ಮಡ ಸೋಮಣ್ಣ, ರಾಘವೇಂದ್ರ, ಯುವ ಜನತಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಶಿರ್ ಹಾಗೂ ನಗರ ಅಧ್ಯಕ್ಷ ರವಿಕಿರಣ್ ಉಪಸ್ಥಿತರಿದ್ದರು.