ಮಡಿಕೇರಿ, ಏ. 2: ಇಲ್ಲಿನ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ವತಿಯಿಂದ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತಿ ರಮೇಶ್ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅನಿತಾ ಸುಧಾಕರ್ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು, ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ಮೊಬೈಲ್ ದುರುಪಯೋಗ, ಅನಕ್ಷರತೆ, ಸ್ವತಂ ಶುಚಿತ್ವ, ಒಳ್ಳೆ ಮತ್ತು ಕೆಟ್ಟ ಮುಟ್ಟುವಿಕೆ ಹೀಗೆ ಹಲವಾರು ಉಪಯುಕ್ತ ಮಾಹಿತಿಯನ್ನು ಮಾತೆಯರಿಗೆ ನೀಡಿ ತಮ್ಮ ಮಕ್ಕಳನ್ನು ಆದಷ್ಟು ಹೆಚ್ಚಿನ ಜವಾಬ್ದಾರಿಯಿಂದ ಗಮನಿಸುತ್ತಿರಬೇಕೆಂದರು. ಪುರುಷ ಆಗಲಿ ಮಹಿಳೆಯಾಗಲಿ ಯಾರೂ ಕೂಡಾ ಹೆಚ್ಚಲ್ಲ. ಇಬ್ಬರಲ್ಲೂ ಒಂದೇ ರೀತಿಯ ಚೈತನ್ಯವಿದೆ. ಇಬ್ಬರೂ ಒಬ್ಬರಿಗೊಬ್ಬರು ಸಹಕಾರ ನೀಡಿ ಗೌರವಿಸಬೇಕು. ಇದರಿಂದ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಸಹಾಯವಾಗುತ್ತದೆ ಎಂದರು.

ಉಪಾಧ್ಯಕ್ಷೆ ಶಶಿಕಲಾ ಲೋಕೇಶ್ ಮತ್ತು ನಂದಿನಿ ಗಣೇಶ್ ಅವರು ನಮಗೆ ಸಿಕ್ಕಿರುವ ಹಕ್ಕನ್ನು ಸದುಪಯೋಗ ಪಡಿಸಿಕೊಂಡು ಜವಾಬ್ದಾರಿಯುತ ಮಹಿಳೆಯಾಗಿ ದೇಶದ ಉತ್ತಮ ಪ್ರಜೆಯನ್ನು ರೂಪಿಸುವಲ್ಲಿ ಶ್ರಮ ವಹಿಸೋಣ ಎಂದರು.

ಇಂದ್ರ ಜಯರಾಂ ಪ್ರಾರ್ಥಿಸಿ, ಲಲಿತಾ ಸುರೇಶ್ ಸ್ವಾಗತಿಸಿದರು. ಜಯಶ್ರಿ ನಾಗೇಶ್ ವಂದಿಸಿದರು. ನಂತರ ಮಹಿಳೆಯರಿಗೆ ಆಟೋಟಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಶಾಂತಾ ವಸಂತ್, ಸರೋಜ ರಾಜು, ಭಾರತಿ ಸುಬ್ರಮಣ್ಯ, ವಿದ್ಯಾ ದೇವರಾಜ್, ಪೂರ್ಣಿಮಾ ಜಗದೀಶ್ ಹಾಗೂ ಸದಸ್ಯೆಯರು ಹಾಜರಿದ್ದರು. ಪದ್ಮಾ ಮೋಹನ್ ಕಾರ್ಯಕ್ರಮ ನಿರೂಪಿಸಿದರು.