ಮಡಿಕೇರಿ, ಏ. 2: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಎಂ. ಬಾಡಗ ಶ್ರೀ ಭಗವತಿ ದೇವಸ್ಥಾನ ಸಮಿತಿ ಸಹಯೋಗದಲ್ಲಿ ಜನರಲ್ ತಿಮ್ಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಪ್ರಕೃತಿ ಅಧ್ಯಯನ ಮತ್ತು ಸಮುದಾಯದ ಅಭಿವೃದ್ಧಿ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡಗು ಸ್ಕೌಟ್ಸ್ ಗೈಡ್ಸ್ ಸಂಸ್ಥೆ ಪ್ರಧಾನ ಆಯುಕ್ತ ಕಂಬಿರಂಡ ಕಿಟ್ಟು ಕಾಳಪ್ಪ ಮಾತನಾಡಿದರು.

ದೇಶ ನನಗೆ ಏನು ಮಾಡಿದೆ ಎಂಬದಕ್ಕಿಂತ ದೇಶಕ್ಕೆ ನಾವು ಏನು ಮಾಡುತ್ತೇವೆ ಎಂಬದು ಮುಖ್ಯ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಯನ್ನು ಅರಿತು ಬಾಳಿದರೆ ಮಾತ್ರ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಜನರಲ್ ತಿಮ್ಮಯ್ಯ ಅವರ ಆದರ್ಶ ತತ್ವವನ್ನು ವಿದ್ಯಾರ್ಥಿಗಳು ಅನುಸರಿಸಿ ಉತ್ತಮ ಜೀವನ ರೂಪಿಸಿಕೊಳ್ಳ ಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ದಕ್ಷಿಣ ಕನ್ನಡ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ತರಬೇತಿ ಆಯುಕ್ತ ಕೆ.ಎಸ್. ಪ್ರತಿಮ್‍ಕುಮಾರ್ ಮಾತನಾಡಿ, ಯುವಜನರಿಗೆ ಜನರಲ್ ತಿಮ್ಮಯ್ಯ ಅವರನ್ನು ನೆನೆಸುವ ಇಂತಹ ಕಾರ್ಯಕ್ರಮ ಮಹತ್ವದಾಗಿದೆ. ರಾಷ್ಟ್ರ ಕಂಡ ಮಹಾನ್ ನಾಯಕ ಜನರಲ್ ತಿಮ್ಮಯ್ಯ ಅವರ ಆದರ್ಶಗಳನ್ನು ಪ್ರತಿ ವಿದ್ಯಾಸಂಸ್ಥೆಗಳು ಆಚರಿಸುವಂತೆ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಅಲ್ಮಾಚಂಡ ಬಿ. ಕರುಂಬಯ್ಯ, ಮುಲ್ಲೇರ ಕಾವೇರಪ್ಪ, ಅಪ್ಪಚಂಡ ಗಣೇಶ್, ರಂಜಿತ್ ಮುಂತಾದವರು ಉಪಸ್ಥಿತರಿದ್ದರು. ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರೋವರ್ ಲೀಡರ್ ವನಿತ್ ಕುಮಾರ್ ವಿದ್ಯಾರ್ಥಿನಿ ಶೋಭಿತ ವಂದಿಸಿದರು, ವಿದ್ಯಾರ್ಥಿ ಶಿವಾಜಿ ಮಂದಣ್ಣ ನಿರೂಪಿಸಿದರು.

ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

ಕೂಡಿಗೆ, ಏ. 2: ಸಮೀಪದ ಕಣೆವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸಮಿತಿಯ ವತಿಯಿಂದ ತಾ. 13 ರಂದು ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ.

ಶ್ರೀ ವಿಕಾರಿನಾಮ ಸಂವತ್ಸರದ ಚೈತ್ರ ಮಾಸ ಶುಕ್ಲ ಪಕ್ಷ ಬಹುಳ ನವಮಿಯ ತಾ. 13 ರಂದು ಮಧ್ಯಾಹ್ನ 12.28 ರಿಂದ 1.48 ಅಭಿಜಿನ್ ಮುಹೂರ್ತದಲ್ಲಿ ವೇದ ಬ್ರಹ್ಮ ನರಹರಿಶರ್ಮಾ ಅವರ ನೇತೃತ್ವದಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ನೆರವೇರಲಿದೆ.

ರಥೋತ್ಸವದ ಅಂಗವಾಗಿ ತಾ. 11 ರಿಂದ ತಾ. 17 ರವರೆಗೆ ವಿವಿಧ ಪೂಜಾ ವಿಧಿ-ವಿಧಾನಗಳು ನಡೆಯಲಿವೆ. ತಾ. 11 ರಂದು ದೇವಾನಾಂದಿ, ಅಂಕುರಾರ್ಪಣ, ರಕ್ಷಾಬಂಧನ, ಧ್ವಜಾರೋಹಣ, ನವಗ್ರಹ ಸ್ಥಾಪನೆ, ಜಪ, ಅಭಿಷೇಕ, ಪುಣ್ಯಾಹವಾಚನ, ಗಣಪತಿಹೋಮ, ದೇವಾತಾಹ್ವಾನ, ಮಹಾಪೂಜೆ ನಡೆಯಲಿದೆ, ಸಂಜೆ ಸಂಧ್ಯಾಪೂಜೆ, ಪ್ರಸಾದ ವಿನಿಯೋಗ, ರುದ್ರಪೂಜೆ ಕ್ರಮಾರ್ಚನೆ, ಮಹಾಪೂಜೆ ನಡೆಯಲಿದೆ.

ತಾ. 12 ರಂದು ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ನವಗ್ರಹ, ಗಣಪತಿ ಹೋಮ, ಮೃತ್ಯಂಜಯ ಹೋಮ, ಪೂರ್ಣಾಹುತಿ, ಮಹಾಪೂಜೆ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ, ಸಂಜೆ ಸೀತಾ ಕಲ್ಯಾಣೋತ್ಸವದ ನಂತರ ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.

ತಾ. 13 ರ ಬ್ರಹ್ಮ ರಥೋತ್ಸವದಂದು ಪವಿತ್ರ ಗಂಗೋದಕದಿಂದ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ವಸಂತ ಮಾಧವ ಪೂಜೆ, ಕೃಷ್ಣ ಗಂಧೋತ್ಸವ, ಶಾಂತೋತ್ಸವ, ಹಾಗೂ ವಿವಿಧ ಪೂಜೆ, ರಥಬಲಿ ಕೈಂಕರ್ಯಗಳು ನೆರವೇರಲಿವೆ. ರಥೋತ್ಸವದ ಅಂಗವಾಗಿ ಮೆರವಣಿಗೆಯಲ್ಲಿ ಆಕರ್ಷಕ ಚಂಡೆ ಪ್ರದರ್ಶನ ಇರುತ್ತದೆ.

ತಾ. 14 ರಂದು ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಅಷ್ಟೋತ್ತರ ಸಹಸ್ರನಾಮಾರ್ಚನೆ, ಮಹಾಪೂಜೆ, ಸಂಜೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ಶ್ರೀ ಬಸವೇಶ್ವರ ಉತ್ಸವ ಮೆರವಣಿಗೆ, ಮಹಾಪೂಜೆ ನಡೆಯಲಿದ್ದು, ತಾ. 15 ರಂದು ಪಂಚಾಮೃತಾಭಿಷೇಕ, ಅಷ್ಟೋತ್ತರ ಸಹಸ್ರನಾಮಾರ್ಚನೆ, ಮಹಾಪೂಜೆ, ಸಂಜೆ ಅಲಂಕೃತ ಮಂಟಪದಲ್ಲಿ ಶ್ರೀ ಆಂಜನೇಯೋತ್ಸವ, ತಾ. 16 ರಂದು ಬಿಲ್ವಪತ್ರಾರ್ಚನೆ, ಸಂಜೆ ಉಯ್ಯಾಲೋತ್ಸವ ನೆರವೇರಲಿದೆ. ಸಂಜೆ ಪುಷ್ಪಾಲಂಕಾರ ಮಂಟಪದಲ್ಲಿ ಶ್ರೀ ಸ್ವಾಮಿಯ ಮೆರವಣಿಗೆ ಮತ್ತು ಆಕರ್ಷಕ ಮದ್ದುಗುಂಡು ಪ್ರದರ್ಶನ, ತಪ್ಪೋತ್ಸವ, ಮಹಾಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.

ರಥೋತ್ಸವದ ಅಂಗವಾಗಿ ತಾ. 13 ರಂದು ಕುಶಾಲನಗರ ಝೇಂಕಾರ್ ಆರ್ಕೆಸ್ಟ್ರಾದಿಂದ ರಸಮಂಜರಿ ಕಾರ್ಯಕ್ರಮ, ತಾ. 14 ರಂದು ಕೂಡುಮಂಗಳೂರು ಯಂಗ್ ಸ್ಟಾರ್ ಡ್ಯಾನ್ಸ್ ಗ್ರೂಪ್ ನಿಂದ ಡ್ಯಾನ್ಸ್ ಕಾರ್ಯಕ್ರಮ, ತಾ. 15 ರಂದು ಪಣವಂ ನಾಟ್ಯಾಲಯ ಕೂಡುಮಂಗಳೂರು ಇವರಿಂದ ಭರತನಾಟ್ಯ, ಭಕ್ತಿಗೀತೆ, ಜಾನಪದ ನೃತ್ಯ, ಚಲನಚಿತ್ರ ಗೀತೆ ನೃತ್ಯ ಮತ್ತು ಮನರಂಜನಾ ಕಾರ್ಯಕ್ರಮ, ತಾ. 16 ರಂದು ಹಾಸನದ ಮೋಹನ್ ಮೆಲೋಡಿಸ್‍ನಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿವೆ ಎಂದು ದೇವಾಲಯದ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್ ತಿಳಿಸಿದ್ದಾರೆ.