ಮಡಿಕೇರಿ, ಏ. 2: ಪ್ರತಿಷ್ಠಿತ ವಿ.ಆರ್.ಎಲ್. ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ಲಾರಿಯಲ್ಲಿ ಮಹಾರಾಷ್ಟ್ರದಿಂದ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಜಿಲ್ಲಾ ಅಬಕಾರಿ ಇಲಾಖೆ ಬೇಧಿಸುವಲ್ಲಿ ಯಶಸ್ವಿಯಾಗಿದೆ.ಮಹಾರಾಷ್ಟ್ರದಿಂದ ಕರ್ನಾಟಕದತ್ತ ಅಕ್ರಮ ಮದ್ಯ ಸಾಗಾಟವಾಗುತ್ತಿದ್ದು, ಎಲ್ಲ ಜಿಲ್ಲೆಗಳಲ್ಲೂ ಈ ಬಗ್ಗೆ ನಿಗಾ ಇಡುವಂತೆ ಗುಪ್ತಚರ ವಿಭಾಗದಿಂದ ಸೂಚನೆ ಬಂದಿತ್ತು.ಈ ಬಗ್ಗೆ ಜಿಲ್ಲಾ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ವೀರಣ್ಣ ಬಾಗಲೂರು ಅವರ ನೇತೃತ್ವದಲ್ಲಿ ವಿಶೇಷ ತಂಡಗಳ ರಚನೆಗೊಂಡು ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧ ತಪಾಸಣಾ ಕೇಂದ್ರಗಳಲ್ಲಿ ನಿಗಾವಹಿಸಲಾಗಿತ್ತು. ತಾ. 1ರ ಮಧÉ್ಯರಾತ್ರಿ ಎಂಹೆಚ್ 13 ಸಿಎನ್ 4292 ನಂಬರನ್ನು ಹೊತ್ತ ಅಶೋಕ ಲೇಲ್ಯಾಂಡ್ ಲಾರಿ ಗೋಣಿಕೊಪ್ಪ-ಪಾಲಿಬೆಟ್ಟ ಜಂಕ್ಷನ್ ಬಳಿ ಬರುತ್ತಿದ್ದಂತೆ ಧಾಳಿ ಮಾಡಿದ ಇಲಾಖಾಧಿಕಾರಿಗಳಿಗೆ ಲಾರಿ ಹಿಂಭಾಗ ಖಾಲಿ ಇದ್ದುದು ಕಂಡುಬಂದರೂ ಚಾಲಕ ಹಾಗೂ ಕ್ಲೀನರ್‍ನ ನಡತೆಯಿಂದ ಅಕ್ರಮದ ಸುಳಿವು ಲಭಿಸಿತು.ಆರೋಪಿಗಳ ಸಹಿತ ಲಾರಿಯನ್ನು ಮಡಿಕೇರಿ ಕಚೇರಿಗೆ ತಂದು ಪರಿಶೀಲಿಸಿದಾಗ ಅಕ್ರಮ ಮದ್ಯ ಮಾರಾಟಕ್ಕೆ ವ್ಯವಸ್ಥಿತ ಜಾಲ ರೂಪಿಸಿರುವದು ಕಂಡು ಬಂದಿತು. ಲಾರಿಯನ್ನು ಹಿಂಬದಿ ಖಾಲಿಯಂತೆ ಕಂಡು ಬಂದರೂ ಕ್ಯಾಬಿನ್‍ನಿಂದ ಸುಮಾರು 5-6 ಅಡಿ ಹಿಂಭಾಗ ಕಬ್ಬಿಣದ ತಗಡು ಬಳಸಿ ಯಾರಿಗೂ ತಿಳಿಯದಂತೆ ಕಪಾಟು ನಿರ್ಮಿಸಿದ್ದು, ಸುತ್ತಲೂ ಕಬ್ಬಿಣದ ಬೋಲ್ಟ್‍ಗಳಿಂದ ಮುಚ್ಚಲಾಗಿತ್ತು. ಅವುಗಳನ್ನು ತೆರವುಗೊಳಿಸಿದಾಗ ಸುಮಾರು 291 ಪೆಟ್ಟಿಗೆಗಳಲ್ಲಿ ಅಕ್ರಮ ಜಿನ್, ವಿಸ್ಕಿ, ರಮ್ ಹಾಗೂ ಬ್ರಾಂಡಿ ಬಾಟಲುಗಳು ಕಂಡು ಬಂದವು.

ನ್ಯಾಷನಲ್ ಡಿಸ್ಟಲರಿ-ಗೋವಾ ಎಂಬ ನಕಲಿ ಹೆಸರಿನಲ್ಲಿ ಮದ್ಯ ಶೇಖರಿಸಿಡಲಾಗಿತ್ತು. ಲಾರಿಯ ಹೊರಭಾಗದಲ್ಲಿ ಅಲ್ಲಲ್ಲೇ ಪ್ರತಿಷ್ಠಿತ ವಿಆರ್‍ಎಲ್ ಸಂಸ್ಥೆಯ ಹೆಸರು ಹಾಕಿ ಯಾರಿಗೂ ಸಂಶಯ ಬಾರದಂತೆ ಆರೋಪಿಗಳು ಲಾರಿಯನ್ನು ಮಾರ್ಪಾಡು ಮಾಡಿದ್ದರು. ಮದ್ಯದ ಮೌಲ್ಯ ಸುಮಾರು 13 ಲಕ್ಷ ಹಾಗೂ ಲಾರಿಯ ಮೌಲ್ಯ ಸುಮಾರು 15 ಲಕ್ಷ ಎಂದು ಅಂದಾಜು ಮಾಡಲಾಗಿದ್ದು, ಒಟ್ಟು 28 ಲಕ್ಷ ಮೌಲ್ಯದ ಮಾಲನ್ನು ಇಲಾಖೆ ವಶಪಡಿಸಿಕೊಂಡಿದೆ.

ಲಾರಿ ಚಾಲಕ ಮಹಾರಾಷ್ಟ್ರದ ಕೊಲ್ಲಾಪುರದ

(ಮೊದಲ ಪುಟದಿಂದ) ಶಂಕರ್ ಪೂಜಾರ್ ಹಾಗೂ ಕ್ಲೀನರ್ ಕರ್ನಾಟಕದ ಸುರೇಶ್ ಇವರುಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಅಕ್ರಮ ಮದ್ಯ ತಯಾರಿಕೆ, ಸಾಗಾಟ ಹಾಗೂ ಮಾರಾಟದ ಭಾರೀ ದೊಡ್ಡ ಮಾಫಿಯಾ ಇದ್ದು, ಅಲ್ಲಲ್ಲೇ ಚಾಲಕರುಗಳನ್ನು ಬದಲಾಯಿಸುವದರಿಂದ ಆರೋಪಿಗಳಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ದೀರ್ಘ ತನಿಖೆಯ ಅಗತ್ಯವಿದ್ದು, ಭಾರೀ ದೊಡ್ಡ ಜಾಲದ ಶಂಕೆಯನ್ನು ಅಬಕಾರಿ ಡಿಸಿ ವ್ಯಕ್ತಪಡಿಸಿದ್ದಾರೆ.

ಇಂದಿನ ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಡಿಸಿ ವೀರಣ್ಣ ಬಾಗೆಲೂರು, ಡಿವೈಎಸ್‍ಪಿ ಮಧುಸೂದನ್, ಅಧಿಕಾರಿಗಳಾದ ಸುರೇಶ್, ಚಂದ್ರಶೇಖರ್, ವಿಕ್ರಂ, ವನಜಾಕ್ಷಿ, ಮೋಹನ್‍ಕುಮಾರ್, ಜಗನ್ನಾಥ್ ನಾಯಕ್, ಸಿಬ್ಬಂದಿಗಳಾದ ಕೆ.ಎಸ್. ಉತ್ತಪ್ಪ, ಪ್ರಕಾಶ್, ಪಾರು ಇವರುಗಳು ಪಾಲ್ಗೊಂಡಿದ್ದರು. - ಟಿ.ಜಿ. ಸತೀಶ್