ಮಡಿಕೇರಿ, ಏ. 2: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುವವರಿಗೆ ಕೊಡಮಾಡಲಾಗುವ ಫೀ.ಮಾ. ಕೆ.ಎಂ. ಕಾರ್ಯಪ್ಪ ಟ್ರೋಫಿ ವಿತರಣೆ, ಪೊಲೀಸ್ ಧ್ವಜ ದಿನಾಚರಣೆ ಹಾಗೂ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗಿತು. ಉತ್ತಮ ಸೇವೆಗಾಗಿ ಈ ಬಾರಿ ಸಿದ್ದಾಪುರ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ಕೆ.ಎ. ಸಿದ್ಧಾರ್ಥ ಅವರು ಫೀ.ಮಾ. ಕಾರ್ಯಪ್ಪ ಟ್ರೋಫಿಗೆ ಭಾಜನರಾದರು.ಅತಿಥಿಗಳಾಗಿದ್ದ ನಿವೃತ್ತ ಪೊಲೀಸ್ ಅಧೀಕ್ಷಕ ಎ.ಕೆ. ಸುರೇಶ್ ಅವರು ಪಥಸಂಚಲನ ಪರಿವೀಕ್ಷಣೆ ಮಾಡಿ ಗೌರವ ವಂದನೆ ಸ್ವೀಕರಿಸಿದ ನಂತರ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳು ಹಾಗೂ ಸಿಬ್ಬಂದಿಗ ಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು. ನಿಷ್ಠೆ, ಬದ್ಧತೆ, ಪ್ರಾಮಾಣಿಕತೆ ಇದ್ದಲ್ಲಿ ಉತ್ತಮ ಸೇವೆ ಸಲ್ಲಿಸಬಹುದು ಎಂದು ಹೇಳಿದರು. ಪೊಲೀಸರು ಪ್ರತಿನಿತ್ಯ ಉತ್ತಮ ಸಾರ್ವಜನಿಕ ಸಂಪರ್ಕ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕು. ಸಾರ್ವಜನಿಕ ಸೇವೆಯೇ ಪ್ರಮುಖ ಎಂಬುದನ್ನು ಅರಿತುಕೊಂಡು ಕಾರ್ಯನಿರ್ವಹಿಸ ಬೇಕು. ಶಿಸ್ತಿನ ಇಲಾಖೆಯಲ್ಲಿ ಆದಷ್ಟು ಮುಂಜಾಗೃತೆ ವಹಿಸಿ ತಪ್ಪು ಆಗದಂತೆ ನೋಡಿಕೊಳ್ಳುವುದು ಅಗತ್ಯ ಎಂದು ಸಲಹೆ ಮಾಡಿದರು.ಏರ್ ಮಾರ್ಷಲ್ (ನಿವೃತ್ತ) ಕೆ.ಸಿ. ಕಾರ್ಯಪ್ಪ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ವಿತರಿಸಿ ಮಾತನಾಡಿ, ಪೊಲೀಸ್ ಇಲಾಖೆಯ ಸೇವೆ ಶ್ಲಾಘನೀಯ. ಆ ನಿಟ್ಟಿನಲ್ಲಿ ಸಮಾಜ ಮುಖಿಯಾಗಿ ಪೊಲೀಸರು ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು. ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆದ ಪಥ ಸಂಚಲನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಅವರು ಸ್ವಾಗತಿಸಿ ಮಾತನಾಡಿ, ಪೊಲೀಸರ ಸೇವೆ, ಶೌರ್ಯ, ಅರ್ಪಣಾ ಮನೋಭಾವವನ್ನು ಗೌರವಿಸುವ ಹಾಗೂ ಪುರಸ್ಕರಿಸುವ ನಿಟ್ಟಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಪೊಲೀಸರು ಜನಸೇವೆಗೆ ಅರ್ಪಣಾ

(ಮೊದಲ ಪುಟದಿಂದ) ಮನೋಭಾವದಿಂದ ದುಡಿಯುತ್ತಾರೆ. ಶಿಸ್ತು ಕರ್ತವ್ಯ ನಿಷ್ಠೆ ಕಾಣಬಹುದಾಗಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿ ಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಹೇಳಿದರು. ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಆರೋಗ್ಯ ಸೇವೆ ಮತ್ತಿತರವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭ ಉತ್ತಮ ಸೇವೆ ಸಲ್ಲಿಸಿದ ಪೊಲೀಸರನ್ನು ಸನ್ಮಾನಿಸಲಾ ಯಿತು. ಆರ್‍ಪಿಐ ಎಸ್. ರಾಚಯ್ಯ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ನಿವೃತ್ತ ಪೊಲೀಸ್ ನಿರೀಕ್ಷಕ ಎನ್.ಟಿ. ಮಹದೇವ, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗಪ್ಪ, ಸುಂದರರಾಜ್, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಇತರರು ಇದ್ದರು. ಡಿಸೋಜ ನಿರೂಪಿಸಿದರು. ನಿವೃತ್ತ ಪೊಲೀಸ್ ಅಧೀಕ್ಷಕ ಅಪ್ಪಯ್ಯ ವಂದಿಸಿದರು.