ಕುಶಾಲನಗರ, ಏ. 2 : ಕುಶಾಲನಗರ ಕೊಪ್ಪ ಚುನಾವಣಾ ತಪಾಸಣಾ ಕೇಂದ್ರದಲ್ಲಿ ಜೀಪಿನಲ್ಲಿ ಸಾಗಾಟ ಮಾಡುತ್ತಿದ್ದ ದಾಖಲೆ ರಹಿತ 6.31 ಲಕ್ಷ ನಗದನ್ನು ಕೇಂದ್ರದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಬೈಲುಕೊಪ್ಪ ಕಡೆಯಿಂದ ಕುಶಾಲನಗರದ ಕಡೆಗೆ ತೆರಳುತ್ತಿದ್ದ ಮಹೇಂದ್ರ ಥಾರ್ ಜೀಪನ್ನು (ಕೆಎಲ್.14.ಟಿ.4221) ಕೇಂದ್ರದ ಅಧಿಕಾರಿಗಳು ಪರಿಶೀಲಿಸಿದ ಸಂದರ್ಭ ಕಾರಿನೊಳಗೆ ದಾಖಲೆ ಯಿಲ್ಲದ 6.31 ಲಕ್ಷ ರೂ.ಗಳು ಪತ್ತೆಯಾಗಿದೆ. ಜೀಪಿನಲ್ಲಿದ್ದ ಜೀವನ್ ಮತ್ತು ಸಂತೋಷ್ ಎಂಬವರನ್ನು ವಿಚಾರಿಸಿದ ತಾವು ದೊಡ್ಡ ಹೊನ್ನೂರಿನ ಕೋಳಿ ಫಾರಂನಲ್ಲಿ ಸಿಬ್ಬಂದಿಗಳಾಗಿದ್ದು ಬ್ಯಾಂಕಿಗೆ ಜಮಾ ಮಾಡಲು ಹಣ ಕೊಂಡೊಯ್ಯ ಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸಮರ್ಪಕ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಗೂಳಪ್ಪ ಕೋತಿನ್ ತಿಳಿಸಿದ್ದಾರೆ. ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಜವರೇಗೌಡ, ತಹಶೀಲ್ದಾರ್ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಪಾಸಣಾ ಕೇಂದ್ರದ ಅಧಿಕಾರಿ ರವಿಕುಮಾರ್, ಶಿವಣ್ಣ, ಪೊಲೀಸ್ ಇಲಾಖೆಯ ಜಯಪ್ರಕಾಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿ ಪಾಲ್ಗೊಂಡಿದ್ದರು. ಇತ್ತೀಚೆಗೆ ಇದೇ ತಪಾಸಣಾ ಕೇಂದ್ರದಲ್ಲಿ ವ್ಯಕ್ತಿಯೊಬ್ಬರು ಸಾಗಿಸುತ್ತಿದ್ದ ದಾಖಲೆ ರಹಿತ 1.97 ಲಕ್ಷ ಹಣ ವಶಪಡಿಸಿಕೊಳ್ಳಲಾಗಿತ್ತು.

ಚುನಾವಣಾ ನೋಡೆಲ್ ಅಧಿಕಾರಿ ಸಿ.ಎಂ.ಪ್ರಮೋದ್, ಸೆಕ್ಟರ್ ಅಧಿಕಾರಿ ಸುಜಯಕುಮಾರ್, ಕಂದಾಯ ಅಧಿಕಾರಿ ಮಧುಸೂದನ್, ಗ್ರಾಮ ಲೆಕ್ಕಿಗ ಗೌತಮ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾದ ಕುಲ್ದೀಪ್ ನಾರಾಯಣ್, ಡಾ.ವಿಕಾಸ್ ಪಾಠಕ್ ಅವರುಗಳು ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.