ಶ್ರೀಮಂಗಲ, ಏ. 3: ಟಿ. ಶೆಟ್ಟಿಗೇರಿ ಪಟ್ಟಣದಲ್ಲಿ ಚುನಾವಣಾ ಪೂರ್ವ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಜನಸಂಪರ್ಕ ಸಭೆ ನಡೆಯಿತು.

ಟಿ. ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವೀರಾಜಪೇಟೆ ತಾಲೂಕು ಡಿವೈಎಸ್‍ಪಿ ನಾಗಪ್ಪ ಅವರು ಮಾತನಾಡಿ, ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವದು ಹಾಗೂ ನಿಯಮಗಳನ್ನು ಪಾಲಿಸುವ ಬಗ್ಗೆ ಮಾಹಿತಿ ನೀಡಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಅಕ್ರಮ ಹಣ ಸಾಗಾಟ, ಮದ್ಯ ಸಾಗಾಟ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಪೊಲೀಸ್ ಇಲಾಖೆ ನಿಗವಹಿಸುತ್ತಿದೆ. ಅಗತ್ಯ ಇರುವಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಚುನಾವಣೆಯು ಶಾಂತಿಯುತವಾಗಿ ನಡೆಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭ ಕುಟ್ಟ ವೃತ್ತ ನೀರಿಕ್ಷಕ ಮಹೇಶ್, ಶ್ರೀಮಂಗಲ ಪೊಲೀಸ್ ಉಪ ನಿರೀಕ್ಷಕ ಮರಿಸ್ವಾಮಿ ಹಾಜರಿದ್ದರು.