ಮಡಿಕೇರಿ, ಏ. 2: ನಗರಸಭಾ ವ್ಯಾಪ್ತಿಯ ಮುಖ್ಯ ನೀರು ಸರಬರಾಜು ಮಾಡುವ ಕೂಟುಹೊಳೆ ಜಲಾಶಯದಲ್ಲಿ ಹಾಗೂ ನಗರಸಭಾ ವ್ಯಾಪ್ತಿಯಲ್ಲಿರುವ ರೋಷಾನರ ಕೆರೆ, ಕನ್ನಂಡಬಾಣೆ ಕೆರೆ, ಪಂಪಿನ ಕೆರೆ ಮತ್ತು ಜಯನಗರ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿರುವ ಕಾರಣ ಹಾಲಿ ಕುಂಡಾಮೇಸ್ತ್ರಿಯಿಂದ ಕುಡಿಯುವ ನೀರನ್ನು ಕೂಟುಹೊಳೆಗೆ ಸರಬರಾಜು ಮಾಡಿ ಮತ್ತು ಕೂಟುಹೊಳೆಯಿಂದ ನಗರಸಭೆ ವ್ಯಾಪ್ತಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಈ ಕುಡಿಯುವ ನೀರನ್ನು ಸಂಸ್ಕರಿಸಿ ಶುದ್ಧೀಕರಿಸಿದ ನೀರಾಗಿರುವದರಿಂದ ಹಾಗೂ ನೀರು ಅತ್ಯಮೂಲ್ಯವಾಗಿರುವದರಿಂದ ಅವಶ್ಯವಿದ್ದಾಗ ಮಾತ್ರ ನೀರನ್ನು ಶೇಖರಿಸಿ ಇಟ್ಟುಕೊಂಡು ನೀರನ್ನು ಬಳಸಲು ಕೋರಿದೆ. ಕುಡಿಯುವ ನೀರನ್ನು ತೋಟಗಳಿಗೆ, ವಾಹನಗಳಿಗೆ ಉಪಯೋಗಿಸುವದು ಕಂಡುಬಂದಲ್ಲಿ ನಲ್ಲಿ ಸಂಪರ್ಕವನ್ನು ಕಡಿತಗೊಳಿಸಲಾಗುವದು ಹಾಗೂ ದಂಡ ವಿಧಿಸಲಾಗುವದು. ಬಾಕಿ ಇರುವ ಕುಡಿಯುವ ನೀರು ತೆರಿಗೆಯನ್ನು ಪಾವತಿಸುವಂತೆ ನಗರಸಭೆ ಪೌರಾಯುಕ್ತ ಎಂ.ಎಲ್. ರಮೇಶ್ ಅವರು ತಿಳಿಸಿದ್ದಾರೆ.