ನಾಪೋಕ್ಲು, ಏ. 3: ಕಾವೇರಿ ತಟದ ಕಲ್ಲುಮೊಟ್ಟೆ ನಿವಾಸಿಗಳಿಗೆ ಕುಡಿಯಲು ನೀರಿಲ್ಲ. ಇದು ಅಚ್ಚರಿಯಾದರೂ ನಿಜ. ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಮೊಟ್ಟೆಯ ಅಂಬೇಡ್ಕರ್ ಭವನ ಸುತ್ತಮುತ್ತ ಬಡ ಕೂಲಿ ಕಾರ್ಮಿಕರೇ ವಾಸವಾಗಿದ್ದು, ಕಳೆದ ನಾಲ್ಕು ದಿನಗಳಿಂದ ನೀರು ಸರಬರಾಜಾಗದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಎರಡು ಟ್ಯಾಂಕುಗಳನ್ನು ಅಳವಡಿಸಿದ್ದರೂ ಮನೆಗಳಿಗೆ ನೀರು ಸರಬರಾಜಾಗದೆ ಸಮಸ್ಯೆ ಎದುರಾಗಿದೆ. ಮಾತ್ರವಲ್ಲದೆ ನೀರು ಸರಬರಾಜು ಮಾಡುವ ವ್ಯಕ್ತಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರಿಂದ ದೂರು ಕೇಳಿಬಂದಿದೆ.

ಕಳೆದ ನಾಲ್ಕು ದಿನಗಳಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ನೀರು ಬಿಡುವ ವ್ಯಕ್ತಿಯನ್ನು ಬದಲಾಯಿಸಿದರೆ ಪರಿಸ್ಥಿತಿ ಸುಧಾರಿಸಲಿದೆ. ನೀರು ಸರಬರಾಜು ಪೈಪ್‍ಗಳಿಂದ ಕೆಲವರಿಗೆ ನೇರವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಪಂಚಾಯಿತಿ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಸ್ಥಳೀಯರಾದ ವಸಂತ ಹೇಳಿದ್ದಾರೆ.

ಕಲ್ಲುಮೊಟ್ಟೆಗೆ ಸರಬರಾಜು ಮಾಡುವ ನೀರಿನ ಮೂಲದಲ್ಲಿ ಮಣ್ಣು-ಕಲ್ಲು ತುಂಬಿರುವ ಪರಿಣಾಮ ಮೋಟರ್ ಹಾಳಾಗಿದೆ. ಅದನ್ನು ದುರಸ್ತಿಪಡಿಸಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವದು. ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಚಿಂತಿಸಲಾಗಿದೆ ಎಂದು ನಾಪೋಕ್ಲು ಪಿ.ಡಿ.ಓ. ಕೇಶವ ತಿಳಿಸಿದ್ದಾರೆ. - ದುಗ್ಗಳ