ಮಡಿಕೇರಿ, ಏ. 2: ಮೂರು ದಿನಗಳ ಕಾಲ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವತಿಯಿಂದ ಸ್ಪಿಕ್ ಮೆಕೆ ಆಶ್ರಯದಲ್ಲಿ ಆಯೋಜಿತ ಕ್ರಾಫ್ಟ್ ಮೇಳಕ್ಕೆ ಹಾಡು, ನೃತ್ಯ, ಸಂಗೀತ ವಾದ್ಯಗಳ ಮೆರುಗಿನೊಂದಿಗೆ ತೆರೆ ಬಿದ್ದಿದೆ.

ಕ್ರಾಫ್ಟ್ ಮೇಳದ ಕೊನೇ ದಿನದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮೈಸೂರಿನ ಹೆಸರಾಂತ ವಯೊಲಿನ್ ಸಹೋದರರಾದ ವಿದ್ಯಾನ್ ನಾಗರಾಜ್ ಮತ್ತು ಡಾ. ಮಂಜುನಾಥ್ ಅವರಿಂದ ಮನಸೆಳೆಯುವ ವಯೊಲಿನ್ ಕಾರ್ಯಕ್ರಮ ಕಲಾಪ್ರೇಮಿಗಳಿಗೆ ರಸದೌತಣವನ್ನೇ ನೀಡಿತು.

ಮಾಂತ್ರಿಕ ವಯೊಲಿನ್ ವಾದನದಿಂದಾಗಿ ಮೈಸೂರಿನ ಖ್ಯಾತಿಯನ್ನು ಜಗತ್ತಿನಾದ್ಯಂತ ಪಸರಿಸಿದ ಈ ಸಹೋದರರು ವಿದೇಶದಲ್ಲಿ ಮೈಸೂರಿನ ವಯೊಲಿನ್ ರಾಜಕುಮಾರರು ಎಂದೇ ಖ್ಯಾತಿಗಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಸಂಗೀತ ಸಾಮ್ರಾಟ್ ಸೇರಿದಂತೆ ಹಲವಾರು ಬಿರುದು, ಪ್ರಶಸ್ತಿಗಳನ್ನು ಪಡೆದಿರುವ ಈ ಸಹೋದರರು ಮಡಿಕೇರಿಯ ಸಂಜೆಯ ತಂಗಾಳಿಯಲ್ಲಿ ತಮ್ಮ ಎರಡನೇ ಕಾರ್ಯಕ್ರಮ ನೀಡಿ ಮನ ಸೆಳೆದರು. ಶರತ್ ಕೌಶಿಕ್, ಸುಮಂತ್ ಮಂಜುನಾಥ್, ತುಮಕೂರು ರವಿಶಂಕರ್ ಹಿಮ್ಮೇಳದಲ್ಲಿ ಸಾಥ್ ನೀಡಿದರು.

ಹಲವಾರು ಅಪೂರ್ವ ಸಂಗೀತವನ್ನು ವಯೊಲಿನ್ ಮೂಲಕ ನುಡಿಸಿದ ಮೈಸೂರು ನಾಗರಾಜ್ ಮತ್ತು ಡಾ.ಮಂಜುನಾಥ್ ಜೋಡಿ ಕಾರ್ಯಕ್ರಮದ ಕೊನೆಯಲ್ಲಿ ವೈಷ್ಣವ ಜನತೋ, ರಘುಪತಿ ರಾಘವ ರಾಜಾರಾಮ್ ಮೂಲಕ ಕ್ರಾಫ್ಟ್ ಮೇಳಕ್ಕೆ ಸಂಗೀತದ ಅಪೂರ್ವತೆಯೊಂದಿಗೆ ತೆರೆ ಎಳೆದರು.