ಸೋಮವಾರಪೇಟೆ, ಏ. 2: ಪಟ್ಟಣ ಸಮೀಪದ ಚೌಡ್ಲು ಗ್ರಾಮ ವ್ಯಾಪ್ತಿಯ ಆಲೇಕಟ್ಟೆ ರಸ್ತೆಯಲ್ಲಿರುವ ಕೊಡವ ಸಮುದಾಯದ ರುದ್ರಭೂಮಿ ಹಿಂಭಾಗ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ ನಾಲ್ವರನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ್ದಾರೆ.

ಅಕ್ರಮ ಇಸ್ಪೀಟ್ ಆಟದ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸ್ಥಳದಲ್ಲಿ ಇಸ್ಪೀಟ್ ಆಡುತ್ತಿದ್ದ ಸ್ಥಳೀಯರಾದ ದರ್ಶನ್, ಅಣ್ಣಯ್ಯ, ನಂದಕುಮಾರ್ ಮತ್ತು ರಫೀಕ್ ಅವರುಗಳನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿದ್ದು, ಠಾಣಾ ಜಾಮೀನಿನ ಮೇರೆ ಬಿಡುಗಡೆ ಮಾಡಿದ್ದಾರೆ.

ಸ್ಥಳದಲ್ಲಿದ್ದ 1 ದ್ವಿಚಕ್ರ ವಾಹನ ಸಹಿತ, ಜೂಜಾಟಕ್ಕೆ ಬಳಸಲಾಗಿದ್ದ 11,400 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಪೇದೆಗಳಾದ ಜಗದೀಶ್, ಶಿವಕುಮಾರ್, ಪ್ರವೀಣ್, ಕೇಶವ ಮತ್ತು ಮಧು ಅವರುಗಳು ಪಾಲ್ಗೊಂಡಿದ್ದರು.