ಸೋಮವಾರಪೇಟೆ, ಏ. 2: ಬಿಸಿಲ ಬೇಗೆಯಿಂದ ಬಿಸಿಯೇರಿದ್ದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಇಂದು ತುಂತುರು ಮಳೆಯಾಗಿ, ವಾತಾವರಣದಲ್ಲಿ ಕೊಂಚ ತಂಪನ್ನು ತಂದಿದ್ದರೆ, ಗ್ರಾಮೀಣ ಭಾಗದಲ್ಲಿ ಆಲಿಕಲ್ಲು ಸಹಿತ ಕೆಲಕಾಲ ಭಾರೀ ಮಳೆಯಾಯಿತು.

ಇಂದು ಅಪರಾಹ್ನ 3 ಗಂಟೆ ಸುಮಾರಿಗೆ ಪಟ್ಟಣ ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿ ಇಳೆಯನ್ನು ತಂಪಾಗಿಸಿತು. ಆದರೆ ಪಟ್ಟಣ ಸಮೀಪದ ಬೀಟಿಕಟ್ಟೆ, ಗೌಡಳ್ಳಿ, ನಂದಿಗುಂದ, ಹೊಸಳ್ಳಿ, ಯಲಕನೂರು ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಯಿತು.

ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಭಾಗದಲ್ಲೂ ಉತ್ತಮ ಮಳೆಯಾಯಿತು. ದಿಢೀರ್ ಸುರಿದ ಮಳೆಯಿಂದ ಜನಜೀವನ ಕೆಲಕಾಲ ಅಸ್ತವ್ಯಸ್ಥಗೊಂಡಿತು. ಆಲಿಕಲ್ಲು ಸುರಿಯುತ್ತಿದ್ದರಿಂದ ರಸ್ತೆಯಲ್ಲಿ ವಾಹನ ಹಾಗೂ ಸಾರ್ವಜನಿಕರ ಸಂಚಾರವೂ ಕೆಲಕಾಲ ಸ್ಥಗಿತಗೊಂಡಿತ್ತು.

ಗೌಡಳ್ಳಿ, ಬೀಟಿಕಟ್ಟೆ, ನಂದಿಗುಂದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗೆ ಲಾಭವಾಗಿದ್ದರೆ, ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ತುಂತುರು ಮಳೆಯಷ್ಟೇ ಬಿದ್ದು, ಕೃಷಿಕರಲ್ಲಿ ನಿರಾಸೆ ಮೂಡಿಸಿತು. ಕಳೆದ ಒಂದು ವಾರದಿಂದ ಮಳೆಗಾಗಿ ಕೃಷಿಕರು ದೇವರ ಮೊರೆ ಹೋಗಿದ್ದರು. ಮಾಲಂಬಿ ಬೆಟ್ಟದಲ್ಲಿರುವ ಶ್ರೀ ಮಳೆಮಲ್ಲೇಶ್ವರ ದೇವರಲ್ಲಿ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಭರತ್‍ಕುಮಾರ್ ಸೇರಿದಂತೆ ನಿರ್ದೇಶಕರು, ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಕಳೆದ ಮಾರ್ಚ್ 25ರಂದು ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

ಇದಾಗಿ ಒಂದು ವಾರದಲ್ಲೇ ಈ ಎರಡೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವದು ಭಕ್ತರ ಪ್ರಾರ್ಥನೆಯ ಫಲವೋ? ಅಥವಾ ಕಾಕತಾಳೀಯವೋ? ಎಂಬಂತಾಗಿದೆ.

ಮಡಿಕೇರಿ : ಮಡಿಕೇರಿಯಲ್ಲೂ ಭಾರೀ ಗುಡುಗು ಸಿಡಿಲು ಸಹಿತ ಕೊಂಚ ಮಳೆಯಾಗಿದೆ. ಗುಡುಗು-ಸಿಡಿಲಿನ ಸದ್ದಿಗೆ ರಸ್ತೆಯಲ್ಲಿ ಹೋಗುತ್ತಿದ್ದವರು ಬೆಚ್ಚಿ ಬಿದ್ದರು.