ಮಡಿಕೇರಿ, ಏ. 1 : ಕರಿಕೆ ಗ್ರಾಮದ ಬಾಳೆಬಳಪು ಕುಂಡತ್ತಿ ಕಾನದ ಪರಿಶಿಷ್ಟರ ಕಾಲೋನಿಗೆ ಹೋಗುವ ರಸ್ತೆಯನ್ನು ದುರಸ್ತಿ ಪಡಿಸುವಂತೆ ಒತ್ತಾಯಿಸಿರುವ ಸ್ಥಳೀಯ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ದುರ್ಬಲರು ಓಡಾಡುವ ರಸ್ತೆಗೆ ಅಡ್ಡಲಾಗಿ ಕೆಲವು ಪ್ರಭಾವಿಗಳು ಬೇಲಿ ನಿರ್ಮಿಸಿಕೊಂಡಿದ್ದು, ಗ್ರಾಮಸ್ಥರು, ಕೂಲಿಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಸಂಪರ್ಕ ರಸ್ತೆ ವ್ಯವಸ್ಥೆಯಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯಿಂದ ಬೇಲಿಯನ್ನು ತೆರವುಗೊಳಿಸುವಂತೆ ಮನವಿ ಮಾಡಿದವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ರುವ ಕಾಲೋನಿ ನಿವಾಸಿಗಳು ಕಂದಾಯ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರ ಸಂಚಾರಕ್ಕೆ ಯೋಗ್ಯವಾದ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಪ್ರಮುಖರು ಒತ್ತಾಯಿಸಿದ್ದಾರೆ.
ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಎಚ್ಚರಿಕೆ ನೀಡಿದ್ದಾರೆ.