ಚೆಟ್ಟಳ್ಳಿ, ಏ. 1 : ಮಡಿಕೇರಿ ತಾಲೂಕಿನ ಹಲವಾರು ಗ್ರಾಮಗಳು ಈಗಾಗಲೇ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ನಲುಗಿಹೋಗಿದ್ದು ಅದರಲ್ಲಿ ಕಾಲೂರು ಗ್ರಾಮವು ಒಂದು. ಈಗಾಗಲೇ ಸರಕಾರವು ಪ್ರಕೃತ್ತಿ ವಿಕೋಪ ಸಂಭವಿಸಿದ್ದ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಲವು ಕೋಟಿಗಟ್ಟಲೆ ಹಣವನ್ನು ವ್ಯಯಿಸುತ್ತಿದೆ . ಆದರೆ ಅದು ಸರಿಯಾದ ಗುಣಮಟ್ಟದಲ್ಲಿ ಕಾಮಗಾರಿ ನಡೆಯುತ್ತಿದೆ, ಅನ್ನುವುದನ್ನು ಪರೀಕ್ಷಿಸುವ ಮಂದಿಯೇ ನುಂಗಣ್ಣಗಳಾಗಿರುವದು ವಿಷಾದನೀಯ.
ಮೊನ್ನೆ ಅದ್ಯಾವುದೋ ಕೆಲಸದ ನಿಮಿತ್ತ ಕಾಲೂರಿನ ಬಾರಿಬೆಳ್ಳಚ್ಚು ಗ್ರಾಮಕ್ಕೆ ತೆರಳಬೇಕಾಗಿ ಬಂತು . ನಾನು ನನ್ನ ಕಾರಿನಲ್ಲಿ ತೇಪೆಹಾಕಿದ ಗುಂಡಿ ಬಿದ್ದ ರಸ್ತೆಯ ಡಾಮರು ಅದೇನು ಬರುವ ಮಳೆಗಾಲಕ್ಕೆ ಉಳಿಯುತ್ತದೋ ಎಂದು ಮನಸ್ಸಿನಲ್ಲಿ ಅಂದುಕೊಂಡು ತೆರಳುತ್ತಿರುವಾಗ ಮುಂದೆ ಕೆಲವು ಜನ ಗ್ರಾಮಸ್ಥರು ಆಗಲೇ ಕಬ್ಬಿಣದ ರಾಡನ್ನು ಕಟ್ಟಿ ಕಾಂಕ್ರ್ರಿಟ್ ಹಾಕಿ ಸೇತುವೆ ನಿರ್ಮಾಣ ಮಾಡುತ್ತಿರುವದನ್ನು ನೋಡುತ್ತಾ ನಿಂತಿದ್ದರು. ಕೆಲಸವೇನೋ ಭರದಿಂದ ಯಂತ್ರೋಪಕರಣದೊಂದಿಗೆ ಸಾಗುತಿತ್ತು. ಅದೇನಾಯಿತೋ ಗೊತ್ತಿಲ್ಲ, ಎಂಭತ್ತಕ್ಕಿಂತ ಹೆಚ್ಚು ಚೀಲ ಸಿಮೆಂಟು ಜಲ್ಲಿ ಮತ್ತು ಕಬ್ಬಿಣದ ಸರಳನ್ನು ಉಪಯೋಗಿಸಿ ಕಟ್ಟಿದ ಸೇತುವೆಯು ನೋಡುತ್ತಿದ್ದಂತೆಯೇ ತೋಡಿನೊಳಗೆ ಕುಸಿಯಿತು. ಇಬ್ಬರು ಸೇತುವೆ ಕೆಳಗೆ ನಿಂತಿದ್ದ ಕಾರ್ಮಿಕರು ಅದೇನೋ ಪುಣ್ಯ ಮಾಡಿದ್ದರೋ ಗೊತ್ತಿಲ್ಲ, ಸ್ವಲ್ಪದರಲ್ಲೇ ಓಡಿ ಪಾರಾದರು. ಅಲ್ಲೇ ಪಕ್ಕದಲ್ಲೇ ನಿಂತು ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸೋಮವಾರಪೇಟೆಯವನೆನ್ನಲಾದ ಗುತ್ತಿಗೆದಾರನ ತಮ್ಮ ತನ್ನ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಗ್ರಾಮಸ್ಥರಿಂದ ಪಾರಾಗುವದರಲ್ಲಿ ಯಶಸ್ವಿಯಾದ. ಮತ್ತೆ ಮುಂದೆ ತಮ್ಮ ಕಳಪೆ ಕಾಮಗಾರಿಗೆ ಉಪಯೋಗಿಸಿದ ಕಬ್ಬಿಣದ ಸಲಾಕೆ ಮತ್ತು ಜಲ್ಲಿಯನ್ನು ಬೇರ್ಪಡಿಸುವ ಕೆಲಸವನ್ನು ಕಾರ್ಮಿಕರು ಮಾಡುತ್ತಿದ್ದದ್ದು ಕಂಡು ಬಂತು. ಇಲ್ಲಿ ವಿಷಯವೇನೆಂದರೆ, ಕಳೆದ ಮಳೆಗಾಲದಲ್ಲಿ ತೀವ್ರತರ ವಾದ ಮಳೆಯನ್ನೂ ಎದುರಿಸಿ ಸಂಕಷ್ಟಕ್ಕೆ ಒಳಗಾದ ಈ ಮುಗ್ಧ ಊರಿನ ಜನರನ್ನು ಮುಠ್ಠಾಳರನ್ನಾಗಿ ಮಾಡುತ್ತಿರುವದು ಶೋಚನೀಯವೇ ಸರಿ. ಇದು ಕೇವಲ ಕಾಲೂರಿನ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರ ಕಳಪೆ ಕಾಮಗಾರಿ ಮಾತ್ರವಲ್ಲ . ಪ್ರಕೃತಿ ವಿಕೋಪಕ್ಕೆ ತುತ್ತಾದ ಗ್ರಾಮದಲ್ಲೆಲ್ಲ ಕಂಡುಬರುವ ಚಿತ್ರಣವಿದು. ಇನ್ನಾದರೂ ಸರಕಾರ ಮತ್ತು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸವನ್ನು ಸರಿಯಾಗಿ ಪರಾಮರ್ಶಿಸಿ ನೋಡಬೇಕು. ಜಿಲ್ಲಾದಿಕಾರಿಯೂ ಸ್ಥಳಕ್ಕೆ ಖುದ್ದಾಗಿ ತೆರಳಿ ಕಾಮಗಾರಿಯನ್ನು ವೀಕ್ಷಿಸಿ ಮುಂಬರುವ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿ ಎಂಬದು ಗ್ರಾಮಸ್ಥರ ಅಂಬೋಣ.