ಮಡಿಕೇರಿ, ಏ. 1: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯ ಅರಣ್ಯದಂಚಿನಲ್ಲಿರುವ, ಅರಣ್ಯ ಪ್ರದೇಶದೊಳಗಿರುವ ಹಾಗೂ ಕಾಡಾನೆ ಹಾವಳಿ ಪ್ರದೇಶದ ಮತಗಟ್ಟೆ ಕೇಂದ್ರಗಳಿಗೆ ಚುನಾವಣೆಯ ಮತದಾನದ ಹಿಂದಿನ ದಿನ ಮತಗಟ್ಟೆ ಸಾಮಗ್ರಿಗಳೊಂದಿಗೆ ಮತಗಟ್ಟೆಗೆ ತೆರಳುವ ಸಂದರ್ಭ ಹಾಗೂ ಮತದಾನದ ನಂತರ ವಾಪಸ್ಸು ಬರುವ ಸಂದರ್ಭದಲ್ಲಿ, ಯಾವದೇ ರೀತಿಯ ಅನಾಹುತ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಹಾಯಕ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಕಾಡಾನೆ ಹಾವಳಿ ಹಾಗೂ ಗಡಿಯಂಚಿನ ಪ್ರದೇಶಗಳಲ್ಲಿ ಮತಗಟ್ಟೆ ಕೇಂದ್ರಗಳಿದ್ದು, ಈ ಕೇಂದ್ರಗಳಿಗೆ ತೆರಳುವ ಸಂದರ್ಭ ಹಾಗೂ ಮತದಾನ ಮುಗಿಸಿ ವಾಪಸ್ಸು ಬರುವ ಸಂದರ್ಭದಲ್ಲಿ ಯಾವದೇ ರೀತಿಯ ಅನಾಹುತ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಆ ನಿಟ್ಟಿನಲ್ಲಿ ಸಹಾಯಕ ಚುನಾವಣಾಧಿಕಾರಿ, ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 49 ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ಮತಗಟ್ಟೆಗಳು ಕಾಡುಪ್ರಾಣಿಗಳ ಬಾಧೆಗೆ ಒಳಪಡುವ ಪ್ರದೇಶದ ವ್ಯಾಪ್ತಿಯಲ್ಲಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಇಂತಹ ಮತಗಟ್ಟೆಗಳಿಗೆ ತೆರಳುವ ಮತ್ತು ವಾಪಸ್ಸು ಬರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.