ಗೋಣಿಕೊಪ್ಪಲು, ಏ.1: ಮರ ಹತ್ತಿ ಎಳನೀರು ಕುಯ್ದ ನಂತರ ಸಿಲ್ವರ್ ಏಣಿಯನ್ನು ತೆಗೆಯುವ ಸಂದರ್ಭದಲ್ಲಿ ಏಣಿ ಜಾರಿ ಸಮೀಪದಲ್ಲಿ ಇದ್ದಂತಹ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟ ದಾರುಣ ಘಟನೆ ನಡೆದಿದೆ.ಇಗ್ಗುಡ ಸತೀಶ್ (50) ಮೋಟೆರ ಧರ್ಮಜ (45) ಹಾಗೂ ರವಿ (40) ಮೃತ ದುರ್ದೈವಿಗಳು. ಮೂಲತಃ ಅಮ್ಮತ್ತಿ ಕಾವಾಡಿ ಗ್ರಾಮದ ಇವರುಗಳು ಕಳೆದ ಕೆಲವು ಸಮಯ ದಿಂದ ಉತ್ತರ ಪ್ರದೇಶ ಮೂಲದ ರಾಮ್ ಜನಾಂ ಮಾಲೀಕತ್ವದ ಅರ್ವತ್ತೋಕ್ಲು ಪಂಚಾಯತಿ ವ್ಯಾಪ್ತಿಯ ಪಿಎಚ್.ಎಸ್. ಕಾಲೋನಿ ಸಮೀಪದ 14 ಏಕ್ರೆ ಕಾಫಿ ತೋಟದ ಉಸ್ತುವಾರಿ ವಹಿಸಿದ್ದರು.ಕಾಫಿ ಗಿಡಗಳಿಗೆ ನೀರು ಹಾಯಿಸಲು ಪ್ರತಿದಿನ ಅಮ್ಮತ್ತಿ ಕಾವಾಡಿಯಿಂದ ಆಗಮಿಸುತ್ತಿದ್ದ ಇವರು ಭಾನುವಾರ ಮುಂಜಾನೆ ಯಿಂದ ಕಾಫಿ ಗಿಡಗಳಿಗೆ ನೀರು ಹಾಯಿಸಿದ್ದಾರೆ. ಮಧ್ಯಾಹ್ನ ಊಟ ಮುಗಿಸಿದ ಇವರುಗಳು ಬಿಸಿಲಿನ ಧಗೆಯನ್ನು ತಾಳಲಾರದೆ ಸಂಜೆಯ ವೇಳೆಯಲ್ಲಿ ತೋಟದಲ್ಲಿ ಇರುವ ತೆಂಗಿನ ಮರದಿಂದ ಎಳನೀರು ಕೊಯ್ದು ಕುಡಿಯುವ ಪ್ರಯತ್ನ ಮಾಡಿದ್ದಾರೆ. ಎಳನೀರು ಕೊಯ್ಯುಲು ತೋಟದಲ್ಲಿ ಇಡಲಾಗಿದ್ದ ಎತ್ತರದ ಸಿಲ್ವರ್ ಏಣಿಯ ಸಹಾಯ ಪಡೆದು ಕಾಯಿಯನ್ನು ಕೊಯ್ದು ಮೂವರು ಎಳನೀರು ಕುಡಿದು ದಣಿವಾರಿಸಿ ಕೊಂಡಿದ್ದಾರೆ.

ನಂತರ ಮರಕ್ಕೆ ಒರಗಿಸಿ ಇಟ್ಟಿದ್ದ ಏಣಿಯನ್ನು ವಾಪಸು ತೆಗೆಯುವ ಸಂದರ್ಭದಲ್ಲಿ ಉದ್ದವಾಗಿದ್ದ ಏಣಿಯ ನಿಯಂತ್ರಣ ತಪ್ಪಿ ಸಮೀಪದಲ್ಲಿ ಹಾದುಹೋಗಿದ್ದ 11 ಕೆ.ವಿ.ಯ ವಿದ್ಯುತ್ ತಂತಿಗೆ ತಗುಲಿದೆ. ಬೀಳುವ ಏಣಿಯನ್ನು ಹಿಡಿಯಲು ಹೋದ ಮೂವರು ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ನಿನ್ನೆ ಸಂಜೆ ಘಟನೆ ನಡೆದಿದೆ. ಸಂಜೆಯಾದರೂ ತನ್ನ ಪತಿ ಸತೀಶ್ ಬರಲಿಲ್ಲ ಎಂದು ಗಾಬರಿ ಗೊಂಡ ಸತೀಶ್ ಪತ್ನಿ ಮೊಬೈಲ್ ಮೂಲಕ ಸಂಪರ್ಕ ಮಾಡುವ ಪ್ರಯತ್ನ ನಡೆಸಿ ದರೂ ಮೊಬೈಲ್ ಸ್ವಿಚ್ ಅಪ್ ಆಗಿತ್ತು.

ಸೋಮವಾರ ಮುಂಜಾನೆ ವೇಳೆಯಲ್ಲಿ ತನ್ನ ಪತಿ ಸತೀಶ್ ಅವರನ್ನು ಹುಡುಕಿಕೊಂಡು ತೋಟಕ್ಕೆ ಆಗಮಿಸಿದ ಸಂದರ್ಭ ಪತಿ ಸತೀಶ್ ತಂದಿದ್ದ ವಾಹನ ತೋಟದ ಸಮೀಪ ದಲ್ಲೆ ನಿಂತಿರುವದು ಗೋಚರಿಸಿದೆ. ತನ್ನ ಪತಿಯನ್ನು ಕೂಗಿ, ಕೂಗಿ ಕರೆದರೂ ಎಲ್ಲಿಯೂ ಧ್ವನಿ ಕೇಳಿ ಬರಲಿಲ್ಲ. ಗಾಬರಿಯಿಂದ ತೋಟದಲ್ಲಿ ಹುಡುಕಿದಾಗ ಮೂವರು ಮೃತಪಟ್ಟಿರು ವದು ಕಂಡು ಬಂದಿದೆ. ಕೂಡಲೇ ಅಕ್ಕ ಪಕ್ಕದಲ್ಲಿರುವ ಜನರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದ ಗೋಣಿ ಕೊಪ್ಪಲು ಚೆಸ್ಕಾಂನ ಇಂಜಿನಿಯರ್ ಘಟನಾ ಸ್ಥಳಕ್ಕೆ ತಮ್ಮ ಸಿಬ್ಬಂದಿ ಯೊಂದಿಗೆ ತೆರಳಿ ವಿದ್ಯುತ್ ಪೂರೈಕೆ ನಿಲ್ಲಿಸಿದರು. ಗೋಣಿಕೊಪ್ಪಲು ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿ ಸ್ಥಳ ಮಹಜರು ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಮರುಗಿದರು. ಮೂರು ಮೃತಪಟ್ಟ ದೇಹಗಳು ಸುಟ್ಟು ಕರಕಲಾಗಿದ್ದವು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

-ಹೆಚ್.ಕೆ.ಜಗದೀಶ್