ಮಡಿಕೇರಿ, ಏ. 1: ನಗರದ ಮೈಸೂರು ರಸ್ತೆಯ ಫೋರ್ಸ್‍ವಿಂಡ್ಸ್ ನಿವಾಸಿ ನಿವೃತ್ತ ಸೇನಾಧಿಕಾರಿ ಕೆ.ಜಿ. ಉತ್ತಯ್ಯ ಅವರ ಮನೆಯಲ್ಲಿ ನಡೆದಿದ್ದ ಬಂದೂಕು ಕಳವು ಪ್ರಕರಣದ ಪ್ರಮುಖ ಆರೋಪಿ ಕಕ್ಕಬೆ ನಾಲಡಿ ಗ್ರಾಮದ ಕೆ.ಸಿ. ಅಶೋಕ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವೀರಾಜಪೇಟೆಯ ಮಾಯಮುಡಿ ರುದ್ರಬೀಡುವಿನ ಸುಳ್ಳಿಯಡ ದೀಪು ಕುಮಾರ್, ಹೆಗ್ಗಳ ಗ್ರಾಮದ ಅಚ್ಚಪಂಡ ಮೊಣ್ಣಪ್ಪ, ತಾಳತ್ತಮನೆಯ ಕಂಬೆಯಂಡ ಪೊನ್ನಪ್ಪ, ಹೆಗ್ಗಳ ಗ್ರಾಮದ ಟಿ.ಎಂ. ಸುಬೇರ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತಾದರೂ, ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಶೋಕನನ್ನು ಬೆಟ್ಟಗೇರಿ ಆಟೋ ನಿಲ್ದಾಣದಲ್ಲಿ ಬಂಧಿಸಲಾಗಿದೆ. ನಾಪೋಕ್ಲುವಿನಲ್ಲಿ ಈ ಹಿಂದೆ ನಡೆದಿದ್ದ ಬಂದೂಕು ಕಳವು ಪ್ರಕರಣವೊಂದರಲ್ಲಿಯೂ ಈತನ ಪಾತ್ರವಿತ್ತು ಎಂದು ಎಸ್ಪಿ ಡಾ. ಸುಮನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಂಧಿತ ಆರೋಪಿಯಿಂದ ಕೊಳಗದಾಳುವಿನ ಮನು ನಾಣಯ್ಯ ಎಂಬವರ ಕಾಡು ಜಾಗದಲ್ಲಿ ಹಾಗೂ ಮಡಿಕೇರಿ - ಮೈಸೂರು ರಸ್ತೆಯ ಅಪ್ಪಣ್ಣ ಎಂಬವರ ತೋಟದಲ್ಲಿ ಅಡಗಿಸಿಟ್ಟಿದ್ದ ಬಂದೂಕುಗಳನ್ನು ವಶಪಡಿಸಿಕೊಂಡಿರುವದಾಗಿ ಎಸ್ಪಿ ಮಾಹಿತಿಯಿತ್ತರು.

ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಅವರ ನಿರ್ದೇಶನದಂತೆ ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರ್‍ರಾಜ್ ಮಾರ್ಗದರ್ಶನದಲ್ಲಿ ಮಡಿಕೇರಿ ನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಎನ್.ಸಿ. ನಾಗೇಗೌಡ, ನಾಪೋಕ್ಲು ಪೊಲೀಸ್ ಠಾಣಾ ಉಪ ನಿರೀಕ್ಷಕ ರೇಣುಕಾ ಪ್ರಸಾದ್, ಎಎಸ್‍ಐ ಕುಶಾಲಪ್ಪ ಮತ್ತು ಮುಖ್ಯಪೇದೆ ಫ್ರಾನ್ಸಿಸ್ ಕೆ.ಜೆ. ಸಿಬ್ಬಂದಿಗಳಾದ ಮಹೇಶ, ನವೀನ, ಮಡಿಕೇರಿ ನಗರ ಪೊಲೀಸ್ ಠಾಣೆಯ ಕೆ.ಕೆ. ದಿನೇಶ್, ನಾಗರಾಜ್ ಎಸ್. ಕಡಗಣ್ಣವರ್ ಹಾಗೂ ಜಿಲ್ಲಾ ಅಪರಾಧ ಪತ್ತೆದಳದ ಯೋಗೇಶ್, ನಿರಂಜನ್, ಸಿ.ಡಿ.ಆರ್. ವಿಭಾಗದ ಗಿರೀಶ್, ರಾಜೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.