ಗೋಣಿಕೊಪ್ಪ ವರದಿ, ಏ. 1 : ನಕ್ಸಲರಿಂದ ರಕ್ಷಿಸಿಕೊಳ್ಳಲು ಕಾಡಂಚಿನ ಗ್ರಾಮಸ್ಥರಿಗೆ ಉಚಿತವಾಗಿ ಮದ್ದುಗುಂಡು ನೀಡಿ ಎಂದು ಬಿರುನಾಣಿ ಗ್ರಾಮಸ್ಥರು ಒತ್ತಾಯಿಸಿದ ಘಟನೆ ನ್‍ಟ್‍ಕುಂದ್ ಬಯಲು ಪ್ರದೇಶದಲ್ಲಿ ನಕ್ಷಲ್ ನಿಗ್ರಹ ದಳದಿಂದ ಅಯೋಜಿಸಿದ್ದ ವಿಶೇಷ ಜನಸಂಪರ್ಕ ಸಭೆಯಲ್ಲಿ ಕೇಳಿ ಬಂತು.

ಎರಡು ವರ್ಷಗಳ ಹಿಂದೆ ಬಿರುನಾಣಿ ವ್ಯಾಪ್ತಿಯಲ್ಲಿ ನಕ್ಸಲ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳದ ಆರ್ಜಿ ಕ್ಯಾಂಪ್ ಸಹಯೋಗದಲ್ಲಿ ನಕ್ಸಲ್ ನಿಗ್ರಹ ಹಾಗೂ ಮತದಾನದ ಅರಿವು ಕಾರ್ಯಕ್ರಮವಾಗಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಈ ಬಗ್ಗೆ ಗ್ರಾಮಸ್ಥರು ಒತ್ತಾಯಿಸಿದರು.

ಕಾಡಂಚಿನ ಗ್ರಾಮಸ್ತರು ನಕ್ಸಲ್ ಚಟುವಟಿಕೆಗೆ ಹೆದರಿ ಜೀವನ ಸಾಗಿಸುವ ಪರಿಸ್ಥಿತಿ ಇದೆ. ಕಳೆದ 2 ವರ್ಷಗಳ ಹಿಂದೆಯಷ್ಟೆ ನಕ್ಸಲರು ಈ ಭಾಗಕ್ಕೆ ಬಂದಿರುವದರಿಂದ ಭಯದ ವಾತಾವರಣ ಕೂಡ ಇದೆ. ಇದ್ದರಿಂದಾಗಿ ಜಿಲ್ಲಾಡಳಿತ ಈ ಭಾಗದ ಕಾಡಂಚಿನ ಜನರಿಗೆ ಭದ್ರತೆಗಾಗಿ ಕೋವಿಗೆ ಬಳಸುವ ಮದ್ದುಗುಂಡುಗಳನ್ನು ಉಚಿತವಾಗಿ ನೀಡುವಂತಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂದರ್ಭ ಎನ್‍ಎಸ್‍ಜಿ ಪಿಎಸ್‍ಐ ಜಗದೀಶ್ ಮಾತನಾಡಿ, ಮದ್ದುಗುಂಡು ಉಚಿತ ವಿತರಣೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವದು, ನಕ್ಸಲರು ಈ ಕಡೆ ಬಂದಾಗ ಅವರಿಗೆ ಯಾವ ರೀತಿಯಲ್ಲೂ ಸಹಾಯ ಮಾಡುವ ಕಾರ್ಯಕ್ಕೆ ಮುಂದಾಗಬೇಡಿ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ, ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆಗೆ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದÀರು.

ಈ ಸಂದರ್ಭ ಪ್ರಾಣಿಗಳಿಂದ ಹಾಗೂ ಅತಿವೃಷ್ಟಿಯಿಂದ ಅಗುತ್ತಿರುವ ಬೆಳೆ ನಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸ್ಥಳೀಯರಾದ ಕೆ.ಸಿ ಕಾಳಪ್ಪ, ಚೊಟ್ಟಂಗಡ ರಾಮು, ಉದಯ, ಬೋಸು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

-ಸುದ್ದಿಪುತ್ರ