ಪೆರಾಜೆ, ಏ.1 : ಮಡಿಕೇರಿ ತಾಲೂಕಿನ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಸೋಮವಾರ ಸಂಜೆ ಶ್ರೀ ಭಗವತಿ ದೊಡ್ಡಮುಡಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ದೊಡ್ಡ ಮುಡಿ ಸೇವಾರಾಧನೆಗೆ ತನ್ನದೇ ಆದ, ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು ಎತ್ತರದ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ್ದು ತೆಳ್ಳಗೆ ಸಿಗಿದ ಬಿದಿರಿನ ಸಲಾಕೆಗಳಿಂದ ಬಾನೆತ್ತರ ಗೋಪುರಾಕಾರ ನಿರ್ಮಿಸಿ, ಅದಕ್ಕೆ ಬಣ್ಣ ಬಣ್ಣದ ಸೀರೆಗಳಿಂದ ಸುತ್ತಿ ಹಾಗೂ ಹೂಗಳಿಂದ ಸಿಂಗರಿಸಿ, ಮುಡಿಯನ್ನು ಪಾತ್ರಿ ಯ ಬೆನ್ನಿಗೆ ಬಿಗಿದು ತಲೆಮೇಲೆ ಹೊತ್ತು ಕೊಂಡು ದರ್ಶನ ಬರುವುದು ದೊಡ್ಡ ಮುಡಿಯ ವೈಶಿಷ್ಟ್ಯ.

ಭಗವತಿ ದೇವಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಇತರ ಕಾರ್ಯಗಳಿಗೆ ಹರಿಕೆ ಹೊತ್ತ ಭಕ್ತರು ತಮ್ಮ ಹರಕೆಯ ರೂಪ ದಲ್ಲಿ ಸೀರೆ, ಚಿನ್ನ, ಬೆಳ್ಳಿಗಳನ್ನು ಅರ್ಪಿಸುತ್ತಾರೆ.

ಅಲ್ಲದೆ ಇದೇ ದಿನ ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರುಕಣ್ಣನ್, ವಿಷ್ಣುಮೂರ್ತಿ ಮತ್ತು ಬೇಟೆಕರಿಮಗನ್ ಈಶ್ವರನ್ ದೈವ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4ಕ್ಕೆ ರಾತ್ರಿ ಪಯ್ಯೋಳಿ ನಡೆಯಿತು. ಪ್ರತಿ ವರ್ಷದಂತೆ ಕರ್ನಾಟಕ ಮತ್ತು ಕೇರಳದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ದೇವಿಯ ಸ್ವರೂಪದಲ್ಲಿ ಕಾಣುವ ಭಗವತಿ ದೊಡ್ಡ ಮುಡಿಯನ್ನು ನೋಡಲು ಆಗಮಿಸಿದ್ದರು.