ಮಡಿಕೇರಿ, ಏ.1 : ಕಕ್ಕಬ್ಬೆ ಹೈಲಾಂಡರ್ಸ್ ಫ್ಯಾಮಿಲಿ ಕ್ಲಬ್ ವತಿಯಿಂದ ತಾ.23 ರಿಂದ 28ರವರೆಗೆ ಚ್ಯಾರಿಟಿ ಹಾಕಿ ಪಂದ್ಯಾವಳಿಯು ನಾಪೋಕ್ಲುವಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್‍ನ ಅಧ್ಯಕ್ಷÀ ಅಪ್ಪಾರಂಡ ಸಾಗರ್ ಗಣಪತಿ, ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ ಮತ್ತು ಕ್ರೀಡಾ ಸ್ಫೂರ್ತಿಯನ್ನು ತುಂಬುವ ಉದ್ದೇಶದಿಂದ ಸಂಬಂಧಿಸಿದ ಗ್ರಾಮಗಳ ಕುಟುಂಬ ತಂಡಗಳಿಗೆ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.

ಈಗಾಗಲೇ ಹತ್ತು ಕುಟುಂಬ ತಂಡಗಳು ನೋಂದಣಿ ಮಾಡಿ ಕೊಂಡಿದ್ದು, ಉಳಿದಿರುವ ತಂಡಗಳ ನೋಂದಣಿಗೆ ತಾ.5 ಕೊನೆಯ ದಿನವಾಗಿದೆ. ಹೆಸರು ನೋಂದಾಯಿ ಸಲು ಮೊ.ಸಂ 9845831675 ನ್ನು ಸಂಪರ್ಕಿಸಬಹುದಾಗಿದೆ.

ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಟುಂಬಕ್ಕೆ ಯಾವದೇ ಶುಲ್ಕ ಇರುವದಿಲ್ಲ. ಆಟ ಆಡುವ ಎಲ್ಲಾ ತಂಡಗಳಿಗೆ ಕ್ಲಬ್ ವತಿಯಿಂದ ಸಮವಸ್ತ್ರ ನೀಡಲಾಗುವದು. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮಕ್ಕಳಿಗೆ ಶಾಲಾ, ಕಾಲೇಜುಗಳಲ್ಲಿ ಉಚಿತ ವಿದ್ಯಾಭ್ಯಾಸ ನೀಡಲು ಕೆಲವು ವಿದ್ಯಾಸಂಸ್ಥೆಗಳು ಮುಂದೆ ಬಂದಿರುವದಾಗಿ ಸಾಗರ್ ತಿಳಿಸಿದರು.

ಸ್ವ-ಇಚ್ಛೆಯಿಂದ, ವೀಕ್ಷಕ ವಿವರಣೆಗಾರರು, ತೀರ್ಪುಗಾರರು, ಮೈದಾನದ ಸಿದ್ಧತೆಗೆ ಎಲ್ಲಾ ಸಂಘ ಸಂಸ್ಥೆಗಳು, ಹಾಕಿ ಪ್ರೇಮಿಗಳು, ಕ್ರೀಡಾಭಿಮಾನಿಗಳು ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಪಂದ್ಯಾವಳಿಯು ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷರಾದ ಕಲಿಯಂಡ ಸಿ. ನಾಣಯ್ಯ, ಹಿರಿಯ ಹಾಕಿ ಪಟು ಬಡಕಡ ದೀನ ಪೂವಯ್ಯ, ಹಿರಿಯ ವೀಕ್ಷಕ ವಿವರಣೆಗಾರರಾದ ಚೆಪ್ಪುಡಿರ ಕಾರ್ಯಪ್ಪ ಹಾಗೂ ಹಾಕಿ ಕೊಡಗು ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದರು.

ವಾರಿಯರ್ಸ್ ಚಾಂಪಿಯನ್ಸ್ ಕಪ್ ಪಂದ್ಯಾವಳಿಗೆ ಬಲಿಷ್ಠ 6 ರಿಂದ 8 ತಂಡಗಳನ್ನು ಆಹ್ವಾನಿಸಲಾಗಿದ್ದು, ಪಂದ್ಯವು ಲೀಗ್ ಮಾದರಿಯಲ್ಲಿ ನಡೆಯಲಿದೆ. ವಿದ್ಯಾರ್ಥಿಗಳನ್ನು ಪೋತ್ಸಾಹಿಸುವ ನಿಟ್ಟಿನಲ್ಲಿ 14 ವರ್ಷದೊಳಗಿನ ಮಕ್ಕಳ ಎರಡು ತಂಡಗಳಿಗೆ ಹಾಕಿ ಪಂದ್ಯಾವಳಿ ನಡೆಸಲಾಗುತ್ತಿದ್ದು, ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವದು. ಕೊಡಗಿನ ಎಲ್ಲಾ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸು ವಂತೆ ಅಪ್ಪಾರಂಡ ಸಾಗರ್ ಗಣಪತಿ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕ್ಲಬ್‍ನ ಪ್ರಮುಖರಾದ ಕಲಿಯಂಡ ಶಂಭು ಕರುಂಬಯ್ಯ, ಕಲಿಯಂಡ ನವೀನ್, ಕಲಿಯಂಡ ಸಂಪತ್ ಹಾಗೂ ಬಾಚಮಂಡ ಲವ ಚಿಣ್ಣಪ್ಪ ಉಪಸ್ಥಿತರಿದ್ದರು.