ಮಡಿಕೇರಿ, ಏ. 1: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಕೊಡಮಾಡುವ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಹದಿಮೂರು ಮಂದಿ ಪತ್ರಕರ್ತರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಪೈಕಿ ಈ ಬಾರಿ ‘ಶಕ್ತಿ’ಗೆ ಮೂರು ಪ್ರಶಸ್ತಿಗಳು ಲಭಿಸಿದ್ದು, ಹಿರಿಯ ಉಪಸಂಪಾದಕ ಕುಡೆಕಲ್ ಸಂತೋಷ್‍ಗೆ ಎರಡು ಪ್ರಶಸ್ತಿ ಲಭಿಸಿದರೆ, ರಂಜಿತಾ ಕಾರ್ಯಪ್ಪಗೆ ಒಂದು ಪ್ರಶಸ್ತಿ ಲಭಿಸಿದೆ.ಕೈಬುಲಿರ ಪಾರ್ವತಿ ಬೋಪಯ್ಯ ಅವರು ತಮ್ಮ ತಂದೆ - ತಾಯಿ ಉತ್ತಯ್ಯ, ಸುಬ್ಬವ್ವ ಅವರುಗಳ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ಮತ್ತು ನೈರ್ಮಲ್ಯ ವರದಿ ಪ್ರಶಸ್ತಿಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಕುಡೆಕಲ್ ಸಂತೋಚ್ ಅವರ ‘ಕಸದ ಗುಡ್ಡದ ಕೆಳಗೆ ಅಸಹನೀಯ ಬದುಕು’ ವರದಿ ಆಯ್ಕೆಯಾಗಿದೆ. ಬೆಳೆಗಾರ ಅಜ್ಜಮಾಡ ಕಟ್ಟಿಮಂದಯ್ಯ ತಮ್ಮ ತಂದೆ - ತಾಯಿ ಅಜ್ಜಮಾಡ ಸುಬ್ಬಯ್ಯ, ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತೋಟಗಾರಿಕಾ ವರದಿ ಪ್ರಶಸ್ತಿಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಕುಡೆಕಲ್ ಸಂತೋಷ್ ಅವರ ‘ ಕಾಡುತ್ತಿದೆ ಕಾಂಡಕೊರಕ - ರೋಬಸ್ಟಾಗೂ ಬಂತು ಕಂಟಕ’ ವರದಿ ಆಯ್ಕೆಯಾಗಿದೆ.ಕೋವರ್‍ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಕೋವರ್‍ಕೊಲ್ಲಿ ಚಂದ್ರಶೇಖರ್ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಮಾನವೀಯ ವರದಿ ಪ್ರಶಸ್ತಿಗೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ರಂಜಿತಾ ಕಾರ್ಯಪ್ಪ ಅವರ ಬ್ಯಾಡಗೊಟ್ಟದ ಬದುಕಿನ ಬವಣೆ ವರದಿ ಆಯ್ಕೆಯಾಗಿದೆ.

ಜಿಲ್ಲಾ ಪತ್ರಕರ್ತರ ಸಂಘದಿಂದ ನೀಡಲಾಗುವ ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಯನ್ನು ಕೊಡಗು ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ದಬ್ಬಡ್ಕ ಗ್ರಾಮಸ್ಥರ ಬದುಕು ಬವಣೆ ವರದಿಗೆ ಹೆಚ್.ಕೆ.ಜಗದೀಶ್ ಪಡೆದುಕೊಂಡಿ ದ್ದಾರೆ. ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಕೊಡಗಿನಲ್ಲೀಗ ಕ್ರೀಡಾ ಹಬ್ಬ’ ವರದಿಗೆ ಉದಿಯಂಡ ಜಯಂತಿ ಪಡೆದುಕೊಂಡಿದ್ದಾರೆ.

ಸಂಘದ ಮಾಜಿ ಉಪಾಧ್ಯಕ್ಷ ಸಿ.ಎನ್. ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿ ಯೋಗ್ರಫಿ ಪ್ರಶಸ್ತಿಯನ್ನು ಟಿವಿ9 ನಲ್ಲಿ ಪ್ರಸಾರವಾದ ‘ರಂಗಸಮುದ್ರದ ಕೆರೆಯಲ್ಲಿ

(ಮೊದಲ ಪುಟದಿಂದ) ಆನೆಯ ಸಾವು ಬದುಕಿನ ಹೋರಾಟ’ ವರದಿಗೆ ನವೀನ್ ಸುವರ್ಣ ಪಡೆದುಕೊಂಡಿದ್ದಾರೆ. ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿದ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ಕೊಡಗು ವೀಕ್ಲಿ ಪತ್ರಿಕೆಯಲ್ಲಿ ಪ್ರಕಟವಾದ ‘ಸೈನಿಕ ಶಾಲೆಯಲ್ಲಿ ಚಿಂಗಪ್ಪ ಸತ್ತಿದ್ದು ಹೇಗೆ’ ಎಂಬ ವರದಿಗೆ ಅನಿಲ್ ಹೆಚ್.ಟಿ. ಪಡೆದುಕೊಂಡಿದ್ದಾರೆ.

ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ಪ್ರಶಸ್ತಿಯನ್ನು ವಿಜಯವಾಣಿಯಲ್ಲಿ ಪ್ರಕಟವಾದ ಕಾಡಾನೆಗಳಿಗೆ ಸ್ವಾಗತ ವರದಿಗೆ ಸುನಿಲ್ ಪೊನ್ನೆಟ್ಟಿ ಪಡೆದುಕೊಂಡಿದ್ದಾರೆ. ಆಪ್ತ ಸಮಾಲೋಚಕಿ ತೇಲಪಂಡ ಆರತಿ ಸೋಮಯ್ಯ ತಮ್ಮ ಮಾವ ಕೋಟೆರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಆರೋಗ್ಯ ವರದಿಗಾಗಿ ಪ್ರಶಸ್ತಿಯನ್ನು ವಿಜಯವಾಣಿಯಲ್ಲಿ ಪ್ರಕಟವಾದ ‘ಜೀವರಕ್ಷಣೆಗೆ ಕಾವೇರಿ ಸಾಂತ್ವನ ಯೋಜನೆ’ ವರದಿಗೆ ಸಣ್ಣುವಂಡ ಕಿಶೋರ್ ನಾಚಪ್ಪ ಪಡೆದುಕೊಂಡಿದ್ದಾರೆ.

ರಾಷ್ಟ್ರೀಯ ಪತ್ರಕರ್ತ ಸಂಘದ ಸದಸ್ಯರಾಗಿರುವ ಎಸ್.ಎ.ಮುರಳೀಧರ್ ತಮ್ಮ ತಾಯಿ ಪಾರ್ವತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಕೃಷಿ ವರದಿ ಪ್ರಶಸ್ತಿಯನ್ನು ಪ್ರಜಾ ಸತ್ಯ ಪತ್ರಿಕೆಯಲ್ಲಿ ಪ್ರಕಟವಾದ ಪ್ರಗತಿಪರ ಕೃಷಿಕ ಜೇನು ಕುರುಬರ ತಮ್ಮು ವರದಿಗೆ ಹಿರಿಕರ ರವಿ ಪಡೆದುಕೊಂಡಿದ್ದಾರೆ. ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ಮಂದ್ರೀರ ಮೋಹನ್ ದಾಸ್ ಅವರು ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರದಿ ಪ್ರಶಸ್ತಿಯನ್ನು ವಿಜಯವಾಣಿಯಲ್ಲಿ ಪ್ರಕಟವಾದ ‘ಕೂಡಿಗೆ ಹಾಲಿನ ಡೈರಿ’ ವರದಿಗೆ ಸುನಿಲ್ ಪೊನ್ನೆಟ್ಟಿ ಪಡೆದುಕೊಂಡಿದ್ದಾರೆ.

ಶಕ್ತಿ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ತಮ್ಮ ಹೋಂಸ್ಟೇ ಆಲ್ಪೆನ್ ಗ್ಲೋ ಹೆಸರಿನಲ್ಲಿ ಸ್ಥಾಪಿಸಿರುವ ಸುದ್ದಿಛಾಯಾಚಿತ್ರ ಪ್ರಶಸ್ತಿಯನ್ನು ಕನ್ನಡ ಪ್ರಭದಲ್ಲಿ ಪ್ರಕಟಗೊಂಡ ‘ತೀರದ ದಾಹ’ ಚಿತ್ರಕ್ಕೆ ವಿಘ್ನೇಶ್ ಭೂತನಕಾಡು ಪಡೆದುಕೊಂಡಿದ್ದಾರೆ. ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ ಪ್ರಶಸ್ತಿಯನ್ನು ಆಂದೋಲನ ಪತ್ರಿಕೆಯಲ್ಲಿ ಪ್ರಕಟವಾದ ‘ಮಲಯಾಳಂ ಪ್ರಭಾವದ ನಡುವೆಯೂ ಕನ್ನಡತನ ಉಳಿಸಿಕೊಂಡ ಕರಿಕೆ ಗ್ರಾಮ’ ವರದಿಗೆ ಎಂ.ಎನ್.ನಾಸೀರ್ ಪಡೆದುಕೊಂಡಿದ್ದಾರೆ.

ಜಿ.ಪಂ.ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ತಮ್ಮ ತಾಯಿ ಬಲ್ಲಾರಂಡ ಮಾಚಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ರಾಜಕೀಯ ವರದಿ ಪ್ರಶಸ್ತಿಯನ್ನು ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಮುಚ್ಚಿದ ಬಾಗಿಲೊಳಗೆ ನಡೆಯಿತು ಹೀಗೊಂತು ಜಯಂತಿ’ ವರದಿಗೆ ಅನಿಲ್ ಹೆಚ್.ಟಿ.ಪಡೆದುಕೊಂಡಿದ್ದಾರೆ. ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ತಮ್ಮ ತಂದೆ ಮೇರಿಯಂಡ ಪೂವಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಹುಲಿ ಸಂರಕ್ಷಣೆ ಕುರಿತ ವರದಿ ಪ್ರಶಸ್ತಿಯನ್ನು ಅವರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ‘ಹುಲಿ ದಾಳಿಗೆ ಕಾಡಿನ ರಕ್ಷಣೆಯೊಂದೇ ಮಾರ್ಗ’ ವರದಿಗೆ ಆರ್ ಸುಬ್ರಮಣಿ ಪಡೆದುಕೊಂಡಿದ್ದಾರೆ.

ಬೆಳೆಗಾರ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ ತಾಯಿ ಅಜ್ಜಮಾಡ ಸುಬ್ಬಯ್ಯ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ಪ್ರಶಸ್ತಿಯನ್ನು ಈ ಬಾರಿ ಇಬ್ಬರು ಪತ್ರಕರ್ತರು ಪಡೆದುಕೊಂಡಿದ್ದಾರೆ. ಕುಡೆಕಲ್ ಸಂತೋಷ್ ಮತ್ತು ವಿಜಯವಾಣಿಯಲ್ಲಿ ಪ್ರಕಟವಾದ ‘ವಯಸ್ಸಾದರೂ ಬತ್ತದ ಹಸಿರು’ ವರದಿಗೆ ಕಿಶೋರ್ ನಾಚಪ್ಪ ಪಡೆದುಕೊಂಡಿದ್ದಾರೆ. ಕೋವರ್‍ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಅವರ ಹೆಸರಿನಲ್ಲಿ ಸ್ಥಾಪಿಸಿದ ಮಾನವೀಯ ವರದಿ ಪ್ರಶಸ್ತಿಯನ್ನು ಈ ಬಾರಿ ಮೂವರು ಪಡೆದುಕೊಂಡಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಪ್ರಾಣಿ ಪ್ರೀತಿಗೆ ಕರಗಿದ ಮನಸ್ಸು’ ವರದಿಗೆ ಕೆ.ಎ.ಆದಿತ್ಯ, ರಜಿತಾ ಕಾರ್ಯಪ್ಪ ಹಾಗೂ ಹೊಸದಿಂಗತ ಪತ್ರಿಕೆಯಲ್ಲಿ ಪ್ರಕಟವಾದ ವಿಧಿ ಮುನಿದ ಬಾಲೆಗೆ ಚೈತನ್ಯ ಕೊಡುವಿರಾ ವರದಿಗೆ ಸತೀಶ್ ನಾರಾಯಣ ಪಡೆದುಕೊಂಡಿದ್ದಾರೆ.

ಜಿಲ್ಲಾ ಪತ್ರಕರ್ತರ ಸಂಘದಿಂದ ನೀಡಲಾಗುವ ಈ ಎಲ್ಲಾ ಪ್ರಶಸ್ತಿಗಳನ್ನು ಸಂಘದ ವಾರ್ಷಿಕ ಮಹಾಸಭೆ ನಡೆಯುವ ದಿನದಂದು ನೀಡಿ ಗೌರವಿಸಲಾಗುವದು. ಪ್ರಶಸ್ತಿ ಪಡೆದ ಎಲ್ಲಾ ಪತ್ರಕರ್ತ ಮಿತ್ರರಿಗೆ ಜಿಲ್ಲಾ ಪತ್ರಕರ್ತರ ಸಂಘ ಅಭಿನಂದನೆ ಸಲ್ಲಿಸುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.