ಮಡಿಕೇರಿ, ಏ. 1: ತಾ. 30ರ ರಾತ್ರಿ ಒಂಟಿ ಮಹಿಳೆಯನ್ನು ಹತ್ಯೆಗೈದು ಚಿನ್ನಾಭರಣ ದೋಚಿದ ಆರೋಪಿ ಗಳನ್ನು ಪೊಲೀಸರು ಇಂದು ಮುಂಜಾನೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಎಸ್ಪಿ ಡಾ. ಸುಮನ್ ಅವರು ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಮೇಕೇರಿ ಗ್ರಾಮದಲ್ಲಿ ವಾಸವಿದ್ದ ಒಂಟಿ ಮಹಿಳೆ ಉಷಾ (45) ಎಂಬವರನ್ನು ಉಸಿರುಗಟ್ಟಿಸಿ ಸಾಯಿಸಿದ ಆರೋಪಿಗಳಾದ ಸೋಮವಾರಪೇಟೆ ಅಬ್ಬೂರುಕಟ್ಟೆಯ ಚಾಲಕ ಎಂ.ಎಸ್. ರವಿ (37) ಹಾಗೂ ಆತನ ಪತ್ನಿ ಲಿಖಿತಾ (30) ಇವರುಗಳನ್ನು ಸೋಮವಾರಪೇಟೆ ಬಸ್ ನಿಲ್ದಾಣದಲ್ಲಿ ಇಂದು ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.ಮೃತೆ ಉಷಾ ಲಿಖಿತಾಳಿಗೆ ಚಿಕ್ಕಮ್ಮ ಆಗಬೇಕಿದ್ದು, ಸ್ವಂತ ಚಿಕ್ಕಮ್ಮನನ್ನೇ ಹಣಕ್ಕಾಗಿ ಪತಿಯೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ.ಆರೋಪಿಗಳಿಗೆ ಅಬ್ಬೂರುಕಟ್ಟೆ ಸ್ವಸಹಾಯ ಸಂಘದಲ್ಲಿ ಲಕ್ಷಾಂತರ ರೂ. ಸಾಲವಿತ್ತು. ಕೆಸುವಿನ ಗೆಡ್ಡೆ ಕೃಷಿಯನ್ನು ಗಣಗೂರು ಗ್ರಾಮದಲ್ಲಿರುವ 4 ಎಕರೆ ಜಮೀನಿನಲ್ಲಿ ಮಾಡಿ ಅದರಲ್ಲೂ ನಷ್ಟ ಉಂಟಾಗಿತ್ತು. ಸಾಲ ತೀರಿಸಲಾಗದೆ ತಮ್ಮ ಬಳಿಯಿದ್ದ ಓಮ್ನಿ ಕಾರು ಹಾಗೂ ಲೇ-ಲ್ಯಾಂಡ್ ವಾಹನಗಳನ್ನು ಹರಾಜು - ಮಾರಾಟ ಮಾಡಿ ಕಳೆದುಕೊಂಡಿದ್ದರು. ಸುಮಾರು 18 ತಿಂಗಳಿನಿಂದ ಮನೆ ಬಾಡಿಗೆ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಕೃತ್ಯವೆಸಗಿದ್ದಾರೆ.ಲಿಖಿತಾ ಆಗಿಂದಾಗ್ಗೆ ಉಷಾ ಅವರ ಮನೆಗೆ ಭೇಟಿ ನೀಡುತ್ತಿದ್ದಳು. ಅರ್ಥಟೈಸ್ ಕಾಯಿಲೆಯಿಂದ ಬಳಲುತ್ತಿದ್ದ ಉಷಾ ಅವರ ಮನೆಯಿಂದ ಚಿನ್ನಾಭರಣಗಳನ್ನು ದೋಚಲು ಸಂಚು ರೂಪಿಸಿದ್ದ ದಂಪತಿ ತಾ. 30ರ ರಾತ್ರಿ ಬೈಕ್‍ನಲ್ಲಿ ಮೇಕೇರಿಗೆ ಬಂದಿದ್ದಾರೆ.
ನಂತರ ಲಿಖಿತಾ ಉಷಾ ಅವರ ಮನೆಗೆ ತೆರಳಿ ಅವರನ್ನು ಮಾತನಾಡಿಸಿ ಮಲಗಿಸಿ ದ್ದಾಳೆ. ನಂತರ ಪತಿ ರವಿಯನ್ನು ಕರೆದು ಇಬ್ಬರೂ ಸೇರಿ ತಲೆ ದಿಂಬನ್ನು ಉಷಾ ಅವರ ಮುಖಕ್ಕೆ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆಗೈದು ಚಿನ್ನಾಭರಣಗಳನ್ನು ದೋಚಿದ್ದರು.
ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕೃತ್ಯಕ್ಕೆ ಬಳಸಿದ ಬೈಕ್ (ಕೆಎ-12 ಕೆ-9605) ಒಂದು ಜೊತೆ ಚಿನ್ನದ ಓಲೆ, ಒಂದು ಚಿನ್ನದ ಸರ ಸೇರಿ ರೂ. 50 ಸಾವಿರ ಮೌಲ್ಯದ ಮಾಲನ್ನು ವಶಪಡಿಸಿ ಕೊಂಡಿದ್ದಾರೆ.
ಎಸ್ಪಿ ಸುಮನ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಸುಂದರ್‍ರಾಜ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಹೆಚ್.ಎನ್. ಸಿದ್ದಯ್ಯ, ಠಾಣಾಧಿಕಾರಿ ಚೇತನ್, ಪ್ರೊಬೇಷನರಿ ಎಸ್‍ಐ ಶ್ರವಣ್, ಸಹಾಯಕ ಠಾಣಾಧಿಕಾರಿ ಅಲೆಕ್ಸಾಂಡರ್, ಸಿಬ್ಬಂದಿಗಳಾದ ದಿನೇಶ್, ಮಂಜುನಾಥ್, ಕಾಳಿಯಪ್ಪ, ರವಿಕುಮಾರ್, ಪ್ರತಿಭಾ, ರಾಧಾ ಸಿ.ಡಿ.ಆರ್. ವಿಭಾಗದ ರಾಜೇಶ್, ಗಿರೀಶ್ ಹಾಗೂ ಚಾಲಕ ಸುನಿಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.