ಮಡಿಕೇರಿ, ಏ.1 : ನಗರದ ಹೊರ ವಲಯದ ಕರ್ಣಂಗೇರಿ ಶ್ರೀರಾಜರಾಜೇಶ್ವರಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗುಡಿಯಲ್ಲಿ ಯುಗಾದಿಯ ದಿನವಾದ ತಾ. 6 ರಂದು ಶ್ರೀ ವೆಂಕಟರಮಣ ಸ್ವಾಮಿಯ ವಿಗ್ರಹ ಪ್ರತಿಷ್ಟಾಪನೆ ನಡೆಯಲಿದೆ ಎಂದು ದೇವಾಲಯದ ಧರ್ಮದರ್ಶಿ ಗೋವಿಂದ ಸ್ವಾಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರತಿಷ್ಟಾಪನಾ ಕಾರ್ಯ ತಾ.5 ರಂದು ಆರಂಭಗೊಂಡು, ತಾ.6 ರಂದು ಮುಂಜಾನೆ 4.30 ರಿಂದ 5.30 ಗಂಟೆಯವರೆಗಿನ ಮುಹೂರ್ತದಲ್ಲಿ ಕಳಸ ಪೂಜೆ ಸೇರಿzಂತೆ ವಿವಿಧ ರೀತಿಯ ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಗ್ರಹದ ಪ್ರತಿಷ್ಟಾಪನೆ ನಡೆಸಲಾಗುವದು ಎಂದರು.

ಇದೇ ಸಂದರ್ಭ ಕಾಶಿಯಿಂದ ತರಲಾದ ತೀರ್ಥ ಸಹಿತ ಭಕ್ತಾಧಿಗಳ 108 ಕುಂಭ ಕಲಶದ ತೀರ್ಥವನ್ನು ವೆಂಕಟರಮಣ ಸ್ವಾಮಿಗೆ ಅಭಿಷೇಕ ಮಾಡಲಾಗುವದು. ಬಳಿಕ ಮಹಾಗಣಪತಿ ಹೋಮದೊಂದಿಗೆ ಪೂಜಾ ಕೈಂಕರ್ಯಗಳು ನಡೆಯಲಿದೆ.

ಮಹಾಪೂಜೆಯ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪನೆ ಯಾಗಲಿದೆ ಎಂದು ಗೋವಿಂದ ಸ್ವಾಮಿ ತಿಳಿಸಿದರು. ದೇವಾಲಯದ ಭಕ್ತರಾದ ಎ.ಸಿ.ಚುಮ್ಮಿ ದೇವಯ್ಯ ಮಾತನಾಡಿ, ಮುಂದಿನ ತಿಂಗಳು ಶ್ರೀ ವೆಂಕಟರಮಣ ದೇವಾಲಯದಲ್ಲಿ ಹರಿಸೇವೆ ಮತ್ತು ಶ್ರೀರಾಜರಾಜೇಶ್ವರಿ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೇವಾಲಯದ ಟ್ರಸ್ಟಿಗಳಾದ ದೇವರಾಜು, ಕಿರಣ್ ಕುಮಾರ್, ಸಚಿನ್ ವಾಸುದೇವ್ ಹಾಗೂ ಕ್ಷೇತ್ರದ ಭಕ್ತರಾದ ವಕೀಲ ಬಾಳೆಯಡ ಕಿಶನ್ ಪೂವಯ್ಯ ಉಪಸ್ಥಿತರಿದ್ದರು.