ಮಡಿಕೇರಿ, ಏ. 1: ದಿ. ಸಿ.ವಿ. ಶಂಕರ್ ಅವರ ಹುಟ್ಟುಹಬ್ಬವಾದ ಇಂದು ಬಾಬು ಸೋಮಯ್ಯ ಅವರ ನೇತೃತ್ವದಲ್ಲಿ, ಸಿ.ವಿ.ಶಂಕರ್ ಹೆಸರಿನಲ್ಲಿ 26ನೇ ವರುಷದ ಉಚಿತ ಬೇಸಿಗೆ ಶಿಬಿರ ಆರಂಭಗೊಂಡಿತು. ಶಾಂತಿ ಶಂಕರ್, ಶಂಕರ್ ಭಾವಚಿತ್ರಕ್ಕೆ ಹೂಹಾರ ಹಾಕಿ ಶಿಬಿರ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಅನಂತ ಶಯನ, ಸಾಮಾನ್ಯವಾಗಿ ಹೊರಜಗತ್ತಿನಲ್ಲಿ ಕಾಣುವ ಬಂಡೆ, ಬೆಟ್ಟ, ಗುಡ್ಡ, ಸಾಗರವೇ ಬಲಿಷ್ಠ ಎಂದು ವಿದ್ಯಾರ್ಥಿಗಳು ತಪ್ಪು ಗ್ರಹಿಸಬಾರದು. ಎಲ್ಲಕ್ಕಿಂತ ಬಲಿಷ್ಠ ಮಾನವನ ಮನವಾಗಿದ್ದು, ಅದನ್ನು ಸದೃಢಗೊಳಿಸಲು ಯೋಗ, ಧ್ಯಾನ, ಕ್ರೀಡೆಗಳನ್ನು ಅಭ್ಯಸಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಂತರ್ರಾಷ್ಟ್ರೀಯ ಕ್ರೀಡಾಪಟು ಮೊಣ್ಣಪ್ಪ ಮಾತನಾಡಿ, ದಿ. ಸಿ.ವಿ. ಶಂಕರ್ ಅವರ ಆದರ್ಶಗಳನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದರು. ವೆಂಕಟೇಶ್ವರ್ ನಿರೂಪಣೆ ಮಾಡಿದರು. ಬಾಬು ಸೋಮಯ್ಯ, ಕೋಟೇರ ಮುದ್ದಯ್ಯ, ಆಸಿಫ್, ಲಕ್ಷ್ಮಣ ಸಿಂಗ್, ಪ್ರಮೀಳಾ ಹಾಗೂ ಇತರರು ಹಾಜರಿದ್ದರು.