ಮಡಿಕೇರಿ, ಏ1: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ತಾ. 3 ರಂದು ಬೆಳಗ್ಗೆ 10 ಗಂಟೆಗೆ ಪದವಿ ವಿಜ್ಞಾನ ವಿದ್ಯಾರ್ಥಿಗಳಿಗೆ ಮಂಗಳೂರು ವಿಭಾಗ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.

‘ಮನುಕುಲಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ’ ಎಂಬ ಕೇಂದ್ರ ವಿಷಯದಡಿ ನಡೆಯಲಿರುವ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಶುದ್ಧ ಮತ್ತು ಹಸಿರು ಶಕ್ತಿ, ಆಹಾರ, ಆರೋಗ್ಯ ಮತ್ತು ನೈರ್ಮಲ್ಯ, ಬಾಹ್ಯಾಕಾಶ ಹುಡುಕಾಟ, ಪರಿಸರ ಸ್ನೇಹಿ ತಂತ್ರಜ್ಞಾನ ಮತ್ತು ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸುವದು ಮತ್ತು ಜೈವಿಕ ತಂತ್ರಜ್ಞಾನ ಮತ್ತು ಆರೋಗ್ಯ ಈ ಐದು ವಿಷಯಗಳ ಕುರಿತು ವಿಜ್ಞಾನ ಮಾದರಿ ತಯಾರಿಸಿ ಪ್ರದರ್ಶಿಸಬೇಕಿದೆ.

ಮಂಗಳೂರು ವಿಭಾಗದ ವಸ್ತು ಪ್ರದರ್ಶನದಲ್ಲಿ ದಕ್ಷಿಣ ಕನ್ನಡ, ಕೊಡಗು ಮತ್ತು ಉಡುಪಿ ಜಿಲ್ಲೆಗಳ ಪದವಿ ವಿಜ್ಞಾನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ವೈಜ್ಞಾನಿಕ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಮೂಲ ಉದ್ದೇಶದಿಂದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ಸಂಘಟಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.

ಕೇಂದ್ರ ವಿಷಯದಡಿ ವಿವಿಧ ಐದು ಉಪ ವಿಷಯಗಳಲ್ಲಿ ಪ್ರತಿ ವಿಷಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ.3 ಸಾವಿರ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.2 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವದು ಎಂದು ತಿಳಿಸಲಾಗಿದೆ. ಒಂದು ತಂಡದಲ್ಲಿ ಒಂದು ವಿಷಯದಲ್ಲಿ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸುವ ಅವಕಾಶವಿದೆ. ವಿಭಾಗಮಟ್ಟದ ಸ್ಪರ್ಧೆಯಲ್ಲಿ ಎಲ್ಲಾ ಉಪ ವಿಷಯಗಳಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಗಳು ನಂತರ ನಡೆಯುವ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿವೆ.