ಮಡಿಕೇರಿ, ಏ. 1: ಕಳೆದ ಜನವರಿ 17 ರಂದು ತೆಲಂಗಾಣದ ಸರೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಣಿ ಉದ್ಯಮ ಮಾಲೀಕ ಮಾರುತಿ ಪ್ರಸಾದ್ ಎಂಬವರ ಪುತ್ರ ವಿನಯ್ (28) ನಾಪತ್ತೆಯಾಗುವದರೊಂದಿಗೆ, ಆತನ ಕಾರು ಮಡಿಕೇರಿಯಲ್ಲಿ ಸಿಕ್ಕಿರುವ ಪ್ರಕರಣ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಇದುವರೆಗೆ ಯುವಕ ವಿನಯ್ ಮನೆಗೆ ವಾಪಾಸ್ಸಾಗಿಲ್ಲವೆಂದೂ, ತನ್ನ ಸ್ನೇಹಿತರಿಗೆ ರೂ. 2 ಕೋಟಿಗೂ ಅಧಿಕ ವಂಚಿಸಿ ಈತ ತಲೆಮರೆಸಿಕೊಂಡಿ ದ್ದಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.ಕಳೆದ ಜ. 19ರ ಬೆಳಿಗ್ಗೆ ಮಡಿಕೇರಿಯ ಹಳೆಯ ಸಿದ್ದಾಪುರ ರಸ್ತೆ ಬದಿ ತೆಲಂಗಾಣ ನೋಂದಣಿಯ ಸ್ಕೋಡಾ ಕಾರು (ಟಿ.ಎಸ್. 07 ಎಫ್.ಕ್ಯೂ 3377) ವಾರಸುದಾರರಿಲ್ಲದೆ ಪತ್ತೆಯಾಗಿತ್ತು. ಈ ಬಗ್ಗೆ ಸಂಶಯಗೊಂಡ ಅಲ್ಲಿನ ನಿವಾಸಿಗಳು ನಗರ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಕಾರಿನ ತಪಾಸಣೆ ನಡೆಸಿದ್ದ ಪೊಲೀಸರು, ವಾಹನದಲ್ಲಿ ಲಭಿಸಿದ ಮೊಬೈಲ್‍ನ ಸಂಖ್ಯೆಯನ್ನು ಆದರಿಸಿ, ವಾಹನ ನೋಂದಾಣಿ ಸಂಖ್ಯೆಗಾಗಿ ತೆಲಂಗಾಣಕ್ಕೆ ಸಂಪರ್ಕಿಸಿ ಸರೂರ್ ನಗರ ಠಾಣೆಗೆ ಸುದ್ದಿ ತಿಳಿಸಿದ್ದರು.

ಆ ಬೆನ್ನಲ್ಲೇ ಜ. 23 ರಂದು ಸರೂರ್ ನಗರ ಪೊಲೀಸರು, ಯುವಕ ವಿನಯ್ ತಂದೆ ಮಾರುತಿ ಪ್ರಸಾದ್‍ರೊಂದಿಗೆ ಬಂದು ವಾಹನವನ್ನು ಕೊಂಡೊಯ್ದಿದ್ದರು. ಅಲ್ಲದೆ ಯುವಕನ ಪತ್ತೆಗಾಗಿ ತನಿಖೆ ಕೈಗೊಂಡಿದ್ದರು. ಹೀಗಿದ್ದೂ ಇದುವರೆಗೆ ಯುವಕನ ಇರುವಿಕೆ ಪತ್ತೆಯಾಗಿಲ್ಲವೆಂದು, ಈತ ಸ್ನೇಹಿತರಿಗೆ ವಂಚಿಸಿ ತಲೆಮರೆಸಿಕೊಂಡಿರುವನೆಂದೂ ದೃಢಪಟ್ಟಿದೆ.

ಅಲ್ಲದೆ, ತನ್ನ ಸ್ನೇಹಿತರಿಗೆ ವಂಚನೆಯೊಂದಿಗೆ ಸುಳಿವಿನ ಬಗ್ಗೆ ದಿಕ್ಕು ತಪ್ಪಿಸಲು ಕೊಡಗಿನತ್ತ ಬಂದಿದ್ದು, ಈ ಸಂದರ್ಭ ತನ್ನ ಕಾರನ್ನು ಮಡಿಕೇರಿಯಲ್ಲಿ ಬಿಟ್ಟು ತೆರಳಿರುವದಾಗಿದೆ ಎಂದು ತೆಲಂಗಾಣ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಮಾತ್ರವಲ್ಲದೆ ಈತ ಬೆಂಗಳೂರು ಮತ್ತು ಹೈದರಾಬಾದ್‍ನ ಕೆಲವರೊಂದಿಗೆ ಸಂಪರ್ಕದಲ್ಲಿರುವ ಮಾಹಿತಿಯಿದ್ದು, ತಲೆ ಮರೆಸಿಕೊಳ್ಳಲು ಮೋಸದ ಜಾಲ ಕಾರಣವೆಂದು, ಅಲ್ಲಿನ ಪ್ರಕರಣದ ತನಿಖಾಧಿಕಾರಿ ಯಾದಯ್ಯ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.