ಮಡಿಕೇರಿ, ಏ. 1: ವಿಧಿಯಾಟ ಎಂದರೆ ವಿಚಿತ್ರವಲ್ಲದೆ ಮತ್ತೇನಿಲ್ಲ.., ಸಪ್ತಪದಿ ತುಳಿದು ಒಬ್ಬರನ್ನೊಬ್ಬರು ಕೈ ಹಿಡಿದು ಸಂಸಾರದ ಸಾಗರದಲ್ಲಿ ತೇಲಬೇಕಿದ್ದ ದಂಪತಿಯರು ಬಾಳ ಪಯಣದ ಅಧ್ಯಯಕ್ಕೆ ಅಂತ್ಯ ಹಾಡಿಕೊಂಡಿದ್ದಾರೆ. ಅಪ್ಪನ ದೇಹ ಕೋಣೆಯೊಳಗಿನ ಸೂರಿನಲ್ಲಿ ಹಗ್ಗದಲ್ಲಿ ನೇತಾಡುತ್ತಿದ್ದರೆ; ಇತ್ತ ಅಮ್ಮನ ದೇಹ ಹಾಸಿಗೆಯ ಮೂಲೆಯಲ್ಲಿ ಅಂಗಾತ ಮಲಗಿದೆ. ಪ್ರಪಂಚವೇ ಏನೆಂದೇ ಅರಿಯದ ಕಂದನು ಅದೇ ಹಾಸಿಗೆ ಮೇಲೆ ಅಮ್ಮನ ದೇಹದ ಬಳಿಯೇ ನಗುನಗುತ್ತಾ ಮೊಬೈಲ್‍ನಲ್ಲಿ ಆಟವಾಡುತಲಿತ್ತು.!ಇಂತಹ ಮನಕಲಕುವ, ಹೃದಯ ಮಿಡಿಯುವ ಚಿತ್ರಣ ಕಂಡುಬಂದಿದ್ದು, ಮಡಿಕೇರಿಯ ಸೋಮವಾರಪೇಟೆಯ ಪಂಪಿನಕೆರೆ ಬಳಿ ಇರುವ ಪುಟ್ಟ ಮನೆಯೊಂದರಲ್ಲಿ.., ಜೀವನದಲ್ಲಿ ಜಿಗುಪ್ಸೆಗೊಂಡ ದಂಪತಿಯರು ನೇಣಿಗೆ ಶರಣಾಗಿದ್ದರೆ, ಪುಟ್ಟ ಮಗುವಿನ ಬಾಳು ದಿಕ್ಕು ತೋಚದಂತಾಗಿದೆ.
ಸಾವನ್ನು ಕರೆದರು: ಮೂಲತಃ ತಿಪಟೂರಿನವರಾದ ಟಿ.ಪಿ. ಚೇತನ್ ಕುಮಾರ್ ಎಂಬವರು ತುಮಕೂರಿನ ವಾಣಿ ಎಂಬವರನ್ನು ವಿವಾಹವಾ ಗಿದ್ದು, ಇವರಿಗೆ ಅಂದಾಜು ಮೂರು ವರ್ಷ ಪ್ರಾಯದ ಹೆಣ್ಣು ಮಗುವಿದೆ. ಕಳೆದ ಹಲವು ವರ್ಷಗಳಿಂದ ಈ ದಂಪತಿಯರು ಮಡಿಕೇರಿಯ ಪಂಪಿನಕೆರೆ ಬಳಿ ಪುಟ್ಟ ಬಾಡಿಗೆ ಮ&divound; Éಯಲ್ಲಿ ತಂಗಿದ್ದರು. ಚೇತನ್‍ಕುಮಾರ್ ಇಲ್ಲಿನ ರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಗಣಿತ ಶಿಕ್ಷಕರಾಗಿ ಕೆಲಸ ನಿರ್ವಹಿಸು ತ್ತಿದ್ದರು. ಸಾಧು ಸ್ವಭಾವದವರಾದ ಚೇತನ್ ಶಾಲೆಯಲ್ಲಿ ತಾನಾಯಿತು ತನ್ನ ಕೆಲಸವಾಯ್ತು ಎಂಬಂತಿದ್ದರೆಂದು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಯವರು ಹಾಗೂ ಸಹದ್ಯೋಗಿಗಳು ಹೇಳುತ್ತಾರೆ. ಅಲ್ಲದೆ ಕಳೆದ ವರ್ಷವಷ್ಟೇ ಚೇತನ್ ಅವರ ಕೆಲಸ ಖಾಯಂ ಆಗಿ ಸರಕಾರಿ ಸಂಬಳ ಸಿಗುತ್ತಿತ್ತು ಎಂದು ಹೇಳುತ್ತಾರೆ. ಆದರೆ ಇಂದೇಕೋ ಸಾವಿನ ಕದ ತಟ್ಟಿದರೆಂಬದು ಮಾತ್ರ ನಿಗೂಢ..!ಪತ್ನಿಯ ಪಾಶಕ್ಕೆ ಕೊರಳು..!
ಇಂದೂ ಕೂಡ ಚೇತನ್ ಶಾಲೆಯ ಕಚೇರಿಯಲ್ಲಿ ದಾಖಲಾತಿಗಳ ಪರಿಶೀಲನೆ ಕೆಲಸದಲ್ಲಿ ತೊಡಗಿಕೊಂಡಿ ದ್ದರು. ಮಧ್ಯಾಹ್ನದ ವೇಳೆಗೆ ಮನೆಯಿಂದ ಕರೆ ಬಂದಿದೆ; ಹೋಗಿ ಬರುವದಾಗಿ ಸಹದ್ಯೋಗಿ iÉೂಂದಿಗೆ ಹೇಳಿ ಮನೆಗೆ ಬಂದಿದ್ದಾರೆ. ಮನೆಗೆ ಬಂದವರು ತಡವಾದರೂ ವಾಪಸ್ ಶಾಲೆಗೆ ಬಾರದ್ದನ್ನು ಗಮನಿಸಿದ ಸಹದ್ಯೋಗಿ ಚೇತನ್‍ಗೆ ಫೋನಾಯಿಸಿ ದಾಗ ‘ಸ್ವಲ್ಪ ಕೆಲಸ ಇದೆ ಬರಲ್ಲ, ಮಧ್ಯಾಹ್ನದ ನಂತರ ರಜೆ ಎಂದು ಮಾಡಿಕೊಳ್ಳಿ’ ಅಂತ ಹೇಳಿದರಂತೆ ಅದೇ ಕೊನೆಯ ಕರೆಯಾಗಿದೆ.
ಚೇತನ್ ಮನೆಗೆ ಬಂದು ನೋಡುವಾಗ ಬಾಗಿಲು ಚಿಲಕ ಹಾಕಿಕೊಂಡಿದ್ದನ್ನು ಗಮನಿಸಿ, ಪತ್ನಿ ಕೂಡ ಓಗೊಡದ್ದರಿಂದ ಬಾಗಿಲು ಮುರಿದು ನೋಡಿದಾಗ ಪತ್ನಿ ವಾಣಿ ನೇಣಿಗೆ ಶರಣಾಗಿ ನೇತಾಡುತ್ತಿದ್ದು ದನ್ನು ಗಮನಿಸಿದ್ದಾರೆ. ವಾಣಿ ಕೂಡ ಮೊದಲು ತನ್ನ ಚೂಡಿದಾರದ ವೇಲ್‍ನಿಂದ ಆತ್ಮಹತ್ಯೆಗೆ ಯತ್ನಿಸಿದ್ದು, ಅದು ಸಾಧ್ಯವಾಗದೆ ಮತ್ತೆ ಹೊರಗಡೆ ಬಟ್ಟೆ ಒಣ ಹಾಕಿದ್ದ ಹಗ್ಗವನ್ನು ಕತ್ತರಿಸಿ ನೇಣಿಗೆ ಶರಣಳಾಗಿದ್ದಾರೆ. ಪತ್ನಿಯ ದೇಹವನ್ನು ಉರುಳಿನಿಂದ ಬಿಡಿಸಿ, ಹಾಸಿಗೆಯ ಒಂದು ಮೂಲೆಯಲ್ಲಿ ಮಲಗಿಸಿ ನಂತರ ತಾನೂ ಕೂಡ ಅದೇ ಹಗ್ಗಕ್ಕೆ ಕೊರಳೊಡ್ಡಿ ನೇಣಿಗೆ ಶರಣಾಗಿದ್ದಾರೆ.
ಮೊದಲೇ ತಿಳಿಸಿದ್ದರು...
ಪತಿ - ಪತ್ನಿಯರಿಬ್ಬರೂ ಸಾವಿಗೆ ಶರಣಾಗುವ ಮುನ್ನ ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿರುವ ಬಗ್ಗೆ ಇಲ್ಲಿ ತಿಳಿದು ಬರುತ್ತಿದೆ. ಚೇತನ್ ಶಾಲೆಯಲ್ಲಿದ್ದಾಗ ಅವರಿಗೆ ಕರೆ ಬಂದ ಕೂಡಲೇ ಮನೆಗೆ ಬಂದಿರುವದು,
(ಮೊದಲ ಪುಟದಿಂದ) ನಂತರದಲ್ಲಿ ಪೊಲೀಸರು ಬಂದು ಮನೆಯನ್ನು ಹುಡುಕಾಡಿರುವದನ್ನು ಗಮನಿಸಿದರೆ, ಮೊದಲೇ ವಿಷಯ ತಿಳಿಸಿ ನೇಣಿಗೆ ಶರಣಾಗಿರುವದು ತಿಳಿದು ಬರುತ್ತದೆ.
ಪೊಲೀಸರ ಹುಡುಕಾಟ
ಮಡಿಕೇರಿ ನಗರ ಪೊಲೀಸರಿಗೆ ದಂಪತಿ ಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಯಾರೋ ಮಾಹಿತಿ ನೀಡಿದ್ದಾರೆ. ಹಾಗಾಗಿ ಸಹಾಯಕ ಠಾಣಾಧಿಕಾರಿ ಉತ್ತಪ್ಪ ಹಾಗೂ ಸಿಬ್ಬಂದಿಗಳು ಪಂಪಿನ ಕರೆ ಬಳಿ, ಎ.ವಿ. ಶಾಲೆ ಬಳಿ, ಆಜಾದ್ ನವರ ಹೀಗೇ ಎಲ್ಲ ಕಡೆ ಹುಡುಕಾಡಿ ವಿಚಾರಿಸಿದ್ದಾರೆ. ಆದರೆ ಈ ದಂಪತಿಯರು ಇರುವ ಮನೆ ತೀರಾ ಒಳಭಾಗದಲ್ಲಿ ಇರುವದರಿಂದ ಯಾರಿಂದಲೂ ಮಾಹಿತಿ ಸಿಗಲಿಲ್ಲ. ಕೊನೆಗೆ ಪೊಲೀಸರೇ ಹುಡುಕುತ್ತಾ ಸಾಗಿದಾಗ ಮನೆಯ ಬಾಗಿಲು ಮುರಿದಿರುವದು ಗೋಚರಿಸಿದ್ದು, ಒಳಗಡೆ ಕಣ್ಣಾಯಿಸಿದಾಗ ದಂಪತಿಯರು ಶವವಾಗಿದ್ದುದು ಪತ್ತೆಯಾಗಿದೆ.
ಪೊಲೀಸರಲ್ಲಿ ಈ ಬಗ್ಗೆ ವಿಚಾರಿಸಿದಾಗ ದಂಪತಿಯರು ಸಾಯುವ ಮುನ್ನ ದೂರದೂರಿನಲ್ಲಿರುವ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಅವರು ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಾವುಗಳು ಬಂದು ಎಷ್ಟೇ ಹುಡುಕಾಡಿದರೂ ಯಾರಿಂದಲೂ ಮಾಹಿತಿ ಸಿಗಲಿಲ್ಲ. ಕೊನೆಗೆ ಮನೆಯೊಂದರ ಹಿಂಭಾಗಕ್ಕೆ ತೆರಳಿ ನೋಡಿದಾಗ ಘಟನೆ ಬಗ್ಗೆ ಪತ್ತೆಯಾಗಿದೆ. ಅಷ್ಟರೊಳಗೆ ಇಬ್ಬರ ಜೀವ ಹೋಗಿಯಾಗಿತ್ತು ಎಂದು ಹೇಳುತ್ತಾರೆ.
ಆಡುತ್ತಿದ್ದ ಕಂದಮ್ಮ
ಪೊಲೀಸರು ಒಳನುಗ್ಗಿ ನೋಡುವಾಗ ಚೇತನ್ ಅವರ ದೇಹ ಹಗ್ಗದಲ್ಲಿ ನೇತಾಡುತ್ತಿದ್ದರೆ, ಇತ್ತ ವಾಣಿಯ ದೇಹ ಹಾಸಿಗೆಯಲ್ಲಿ ಅಂಗಾತ ಬಿದ್ದಿತ್ತು. ಪಕ್ಕದಲ್ಲೇ ಏನೂ ಅರಿಯದ ಕಂದಮ್ಮ ಅಮ್ಮನ ಮೊಬೈಲ್ ಹಿಡಿದುಕೊಂಡು ಆಟವಾಡುತ್ತಿತ್ತು. ನಂತರ ಪೊಲೀಸರು ಮಾಹಿತಿ ಸಂಗ್ರಹಿಸಿ, ವಿದ್ಯಾಸಂಸ್ಥೆಯವರಿಗೆ ವಿಷಯ ತಿಳಿಸಿದ ಮೇರೆಗೆ ವಿದ್ಯಾಸಂಸ್ಥೆಯವರು ಬಂದಾಗಲೂ ಆ ಕಂದ ಆಟವಾಡುತ್ತಲೇ ಇವರತ್ತ ನಗು ಬೀರಿದೆ. ವಿದ್ಯಾಸಂಸ್ಥೆಯವರು, ಪೊಲೀಸರು ಸೇರಿ ಆ ಪುಟ್ಟ ಕಂದನನ್ನು ಪಕ್ಕದ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಕಂದ ಅಲ್ಲಿ ತನ್ನ ಆಟ ಮುಂದುವರಿಸಿತು. ಸುದ್ದಿ ತಿಳಿದು ಸ್ಥಳಕ್ಕೆ ಬಂದವರೆಲ್ಲರೂ ಈ ಕರುಳು ಹಿಂಡುವ ಘಟನೆಯನ್ನು ಕಂಡು ಕಣ್ಣೀರಿಡುತ್ತಿದ್ದುದು ಅಲ್ಲಿ ಕಂಡು ಬಂದಿತು. ಊರಿನಿಂದ ಮೃತರ ಪೋಷಕರು ಬಂದ ಬಳಿಕ ಮೃತದೇಹವನ್ನು ಅವರುಗಳ ಸುಪರ್ದಿಗೆ ಒಪ್ಪಿಸಲಾಯಿತು. - ಕುಡೆಕಲ್ ಸಂತೋಷ್