ಸೋಮವಾರಪೇಟೆ,ಏ.1: ಲೋಕಸಭಾ ಚುನಾವಣೆ ಹಿನ್ನೆಲೆ ಕೆಲ ಪ್ರಕರಣಗಳಲ್ಲಿ ಆರೋಪಿಯಾಗಿರುವ ಪಟ್ಟಣದ ಜನತಾ ಕಾಲೋನಿ ನಿವಾಸಿ ಕರೀಂ ಬೇಗ್ ಅಲಿಯಾಸ್ ಇಮ್ರಾನ್ ಗಾಜಾನನ್ನು ತುಮಕೂರು ಜಿಲ್ಲೆಗೆ ಗಡೀಪಾರು ಮಾಡಿ ಜಿಲ್ಲಾ ಉಪ ವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಆರೋಪಿಯು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ಯೊಂದಿಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಭವವಿರುವದರಿಂದ ಲೋಕಸಭಾ ಚುನಾವಣೆ ಹಿನ್ನೆಲೆ ಆರೋಪಿಯನ್ನು ಒಂದು ತಿಂಗಳ ಕಾಲ ಜಿಲ್ಲೆಯಿಂದ ಗಡೀಪಾರು ಮಾಡಲಾಗಿದೆ ಎಂದು ಉಪ ವಿಭಾಗೀಯ ದಂಡಾಧಿಕಾರಿಗಳೂ ಆಗಿರುವ ಉಪ ವಿಭಾಗಾಧಿಕಾರಿ ಆದೇಶಿಸಿದ್ದಾರೆ.

ಆರೋಪಿಯು ಗೂಂಡಾ ಪ್ರವೃತ್ತಿಯೊಂದಿಗೆ ಸಮಾಜದಲ್ಲಿ ಕೋಮುಗಲಭೆಗೆ ಪ್ರೋತ್ಸಾಹ ನೀಡುವ ಸಂಭವವಿರುವದರಿಂದ ಚುನಾವಣೆ ಮುಗಿಯುವವರೆಗೆ ತುಮಕೂರು ಜಿಲ್ಲೆಗೆ ಗಡೀಪಾರು ಮಾಡಲಾಗಿದ್ದು, ತುಮಕೂರು ನಗರ ಪೊಲೀಸ್ ಠಾಣೆಗೆ ಪ್ರತಿ 2 ದಿನಗಳಿಗೊಮ್ಮೆ ತೆರಳಿ ಹಾಜರಾತಿ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.