ಮಡಿಕೇರಿ, ಮಾ. 31: ಸಾಧಕರ ಜೀವನ ಮತ್ತು ಸಾಧನೆಗಳು ಪಠ್ಯ ಪುಸ್ತಕಗಳಲ್ಲಿ ಅಳವಡಿಕೆಯಾಗುವ ಮೂಲಕ ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ನಿರ್ಮಾಣದೊಂದಿಗೆ, ಸಾಧಕರ ಕುರಿತು ಅರಿವನ್ನು ಮೂಡಿಸುವಂತಹ ಪ್ರಯತ್ನಗಳು ಆಗಬೇಕೆಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಕರೆ ನೀಡಿದ್ದಾರೆ.

ನಗರದ ಸನ್ನಿಸೈಡ್‍ನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಫೀ.ಮಾ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂ ಸಹಯೋಗದಲ್ಲಿ ನಡೆದ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ 113ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ಜನರಲ್ ತಿಮ್ಮಯ್ಯ ಅವರ ಜೀವನ, ವ್ಯಕ್ತಿತ್ವ, ಮಿಲಿಟರಿ ಸಾಧನೆಗಳು ಮತ್ತು ನಾಯಕತ್ವದ ಗುಣಗಳ ಕುರಿತು ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಉಲ್ಲೇಖಗಳೊಂದಿಗೆ ಯುವಪೀಳಿಗೆಗೆ ಜೀವನ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.ಜನವರಿ 28 ರಂದು ಫೀ.ಮಾ. ಕಾರ್ಯಪ್ಪ ಹಾಗೂ ಮಾರ್ಚ್ 31 ರಂದು ಜನರಲ್ ತಿಮ್ಮಯ್ಯ ಅವರ ಜನ್ಮ ದಿನಾಚರಣೆಗೆ ಮಾತ್ರ ಇವರ ನೆನಪುಗಳು ಸೀಮಿತವಾಗಿರುವದನ್ನು ತಾವು ಗಮನಿಸಿದ್ದು, ಉಳಿದಂತೆ ಅವರನ್ನು ಮರೆಯುವ ಪರಿಸ್ಥಿತಿಯೇ ಹೆಚ್ಚು ಎಂದು ವಿಷಾದಿಸಿದರು. ಜನ್ಮ ದಿನಾಚರಣೆಯ ಹೆಸರಿನಲ್ಲಿ ದುಂದು ವೆಚ್ಚ ಮಾಡದೆ ಅರ್ಹರಿಗೆ ಸಹಾಯ ಮಾಡುವ ಮೂಲಕ ಸರಳತೆಯನ್ನು ಪಾಲಿಸಬೇಕೆಂದು ಅವರು ಕರೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ಮೇಜರ್ ಜನರಲ್ ಕುಪ್ಪಂಡ ಪಿ.ನಂಜಪ್ಪ ಮಾತನಾಡಿ, ತಾವು ಜನರಲ್ ತಿಮ್ಮಯ್ಯ ಅವರ ವ್ಯಕ್ತಿತ್ವ ಮತ್ತು ಸಾಹಸಗಳಿಂದ ಪ್ರೇರಣೆ ಪಡೆದು ಅವರ ರೆಜಿಮೆಂಟಿಗೆ ಸೇರಿದ್ದನ್ನು ಹೇಳಿದರಲ್ಲದೆ, ತಿಮ್ಮಯ್ಯನವರು ಎಂತಹ ಮಿಲಿಟರಿ ತಂತ್ರಜ್ಞ ಮತ್ತು ಯುದ್ಧ

(ಮೊದಲ ಪುಟದಿಂದ) ವಿಶಾರದರಾಗಿದ್ದರು ಎಂಬುದನ್ನು 2ನೇ ಮಹಾಯುದ್ಧ, ಬರ್ಮಾ ಯುದ್ಧ ಮತ್ತು 1962ರ ಚೈನಾ ಯುದ್ಧಗಳನ್ನು ಉಲ್ಲೇಖಿಸಿದ ಅವರು, ರಾಣಿಕೇತ್‍ನಲ್ಲಿರುವ ಕುಂಮಾವೋ ರೆಜಿಮೆಂಟಿನ ತಿಮ್ಮಯ್ಯ ಕಾನರ್ ಇಂದಿಗೂ ಸಾಕ್ಷಿಯಾಗಿದ್ದು, ಅಲ್ಲಿರುವ ಎಲ್ಲಾ ವಸ್ತುಗಳ ಪ್ರತಿಕೃತಿಗಳನ್ನು ಮಡಿಕೇರಿಯಲ್ಲಿನ ಸನ್ನಿಸೈಡ್‍ನಲ್ಲಿ ಪ್ರತಿಷ್ಠಾಪಿಸಲಾಗುವದೆಂದು ಹೇಳಿದರು.

ಭಾರತೀಯ ಭೂ ಸೇನೆಯಲ್ಲಿ ಹಾಲಿ ಲೆಫ್ಟಿನೆಂಟ್ ಜನರಲ್‍ಗಳಾಗಿ ಪಿ.ಸಿ. ತಿಮ್ಮಯ್ಯ ಮತ್ತು ಸಿ.ಪಿ. ಕಾರ್ಯಪ್ಪ ಕಾರ್ಯ ನಿರ್ವಹಿಸುತ್ತಿದ್ದು, ಹಿಂದೆ ಕಾರ್ಯಪ್ಪ ಮೊದಲಿಗರಾಗಿದ್ದು, ಈಗ ತಿಮ್ಮಯ್ಯ ಮೊದಲಿಗರಾಗಿದ್ದಾ ರೆಂದು ಕೆ.ಪಿ. ನಂಜಪ್ಪ ಹರ್ಷದಿಂದ ನುಡಿದರು. ಜಿಲ್ಲೆಯಲ್ಲಿ ಎನ್‍ಸಿಸಿ, ಸೈನಿಕ ಶಾಲೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಡೆಟ್‍ಗಳು ಸೇನೆಗೆ ಸೇರುವದರ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದು ಹಾರೈಸಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಮುಂದಿನ ಜನರಲ್ ತಿಮ್ಮಯ್ಯ ಜನ್ಮ ದಿನಾಚರಣೆ ಸಂದರ್ಭದಲ್ಲಿ ಅತ್ಯಂತ ಅದ್ಧೂರಿಯಾಗಿ ತಿಮ್ಮಯ್ಯ ಸ್ಮಾರಕವನ್ನು ಲೋಕಾರ್ಪಣೆ ಗೊಳಿಸುವದರ ಮೂಲಕ ಆಚರಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ಸಹಕಾರವನ್ನು ನೀಡುವದಾಗಿ ಹೇಳಿದರಲ್ಲದೆ, ಸರ್ಕಾರದ ವತಿಯಿಂದ ಶೇ.75 ರಷ್ಟು ಕೆಲಸಗಳು ಆಗಿದ್ದು, ಇನ್ನಷ್ಟು ಶೀಘ್ರವಾಗಿ ಕೆಲಸ ಮುಗಿಸುವ ಭರವಸೆ ನೀಡಿದರು.

ಕೊಡಗಿನ ಬಗ್ಗೆ ಕೇಳಿ ತಿಳಿದಿದ್ದ ತಮಗೆ; ತಮ್ಮ ತಂದೆಯ ಮೂಲಕ ಜನರಲ್ ತಿಮ್ಮಯ್ಯ ಅವರ ಜೀವನ ಮತ್ತು ಸಾಧನೆ ಬಗ್ಗೆ ಮಾಹಿತಿ ಪಡೆದದ್ದನ್ನು ನೆನಪಿಸಿದ ಜಿಲ್ಲಾಧಿಕಾರಿ, ತಿಮ್ಮಯ್ಯ ಅವರ ಪತ್ನಿ ನೀನಾ ಅವರ ಜೀವನ ಸಾಧನೆ ಕೂಡ ಮಹೋನ್ನತವಾಗಿದ್ದು, ಅವರನ್ನು ಈ ದಿನದಂದೇ ನೆನೆಯುವದು ಸಂದರ್ಭೋಚಿತವೆಂದು ನುಡಿದರು.

ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಪಾಲ್ಗೊಂಡಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳಾದ ಎನ್.ಎನ್. ಪೊನ್ನಣ್ಣ, ಬಿ.ಎಸ್. ತೇಜಸ್ ಅವರುಗಳನ್ನು ಗಣ್ಯರು ಸನ್ಮಾನಿಸಿದರು. ಇದೇ ಸಂದರ್ಭ ಫೋರಂನ ಸಂಚಾಲಕ ನಿವೃತ್ತ ಮೇಜರ್ ಬಿ.ಎ. ನಂಜಪ್ಪ , ದಿ.ಲೆ.ಜ. ಬಿ.ಸಿ.ನಂದ ಅವರು ಕಂಡ ಜನರಲ್ ತಿಮ್ಮಯ್ಯ ಎಂಬ ವಿಷಯದ ಕುರಿತು ಮಾತನಾಡಿದರಲ್ಲದೆ, ಸನ್ನಿ ಸೈಡ್ ರೂಪುಗೊಳ್ಳುವಲ್ಲಿ ಬಿ.ಸಿ.ನಂದ ಮತ್ತು ಏರ್ ಮಾರ್ಷಲ್ ಕಾರ್ಯಪ್ಪ ಅವರ ಸಹಕಾರವನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೋರಂನ ಅಧ್ಯಕ್ಷ ಕರ್ನಲ್ ಕೆ.ಸಿ.ಸುಬ್ಬಯ್ಯ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ದಿನವನ್ನು ರಾಷ್ಟ್ರೀಯ ಪೌರುಷ ದಿನವಾಗಿ ಆಚರಿಸಬೇಕು ಎಂದರು. ಜನರಲ್ ತಿಮ್ಮಯ್ಯ ಅವರು ಬಾಳಿ ಬದುಕಿದ್ದಾರೆ. ಭಾರತೀಯ ಭೂ ಸೇನೆಯಲ್ಲಿ ಕ್ರೀಡೆಗೆ ಉತ್ತೇಜನ ನೀಡಿದ ಅವರು, ತಿಮ್ಮಯ್ಯ ಕಮಿಷನ್ ಆರಂಭಿಸಿ ಹಾಕಿ ಮಾಂತ್ರಿಕ ಧ್ಯಾನ್‍ಚಂದ್ ಮೇಜರ್ ಪದವಿಯನ್ನು ಪಡೆಯಲು ಕಾರಣೀಭೂತರಾದವ ರೆಂದು ಸ್ಮರಿಸಿದರು.

ಮುಕ್ಕೋಡ್ಲುವಿನ ವ್ಯಾಲಿ ಡ್ಯೂ ತಂಡದಿಂದ ಕತ್ತಿಯಾಟ್ ಮತ್ತು ಉಮ್ಮತ್ತಾಟ್ ಕಲಾ ಪ್ರದರ್ಶನ ಜರುಗಿತು. ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀ ಪ್ರಿಯ, ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್. ಲಾಲ್, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಮುಖ್ಯಸ್ಥ ಮೇಜರ್ ಡಾ. ರಾಘವ್, ಉಪವಿಭಾಗಾಧಿಕಾರಿ ಜವರೇಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್, ಮಾಜಿ ಸೈನಿಕರ ಪುನರ್ವಸತಿ ಮತ್ತು ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಲೆಫ್ಟಿನೆಂಟ್ ಕರ್ನಲ್ ಗೀತಾ ಎನ್.ಶೆಟ್ಟಿ, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪಿ.ಕೆ. ಪೊನ್ನಪ್ಪ, ನಗರಸಭಾ ಕಮಿಷನರ್ ಎನ್.ಎಂ. ರಮೇಶ್, ನಿರ್ಮಿತಿ ಕೇಂದ್ರದ ಸಹಾಯಕ ನಿರ್ದೇಶಕ ಸಚಿನ್ ಸೇರಿದಂತೆ ಇತರ ಗಣ್ಯರು, ಮಾಜಿ ಸೈನಿಕರು ಮತ್ತು ಸೇನಾಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಮೊದಲಿಗೆ ನಿವೃತ್ತ ಉಪನ್ಯಾಸಕ ಬಿ.ಸಿ. ಶಂಕರಯ್ಯ ನಾಡಗೀತೆ ಹಾಡಿದರು. ಜಿಲ್ಲಾಧಿಕಾರಿ ಜ್ಯೋತಿ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಣ್ಯರು ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಜನರಲ್ ತಿಮ್ಮಯ್ಯ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು.ಶಿಕ್ಷಕಿ ಚೋಕಿರ ಅನಿತಾ ಕಾರ್ಯಕ್ರಮ ನಿರೂಪಿಸಿ, ಫೋರಂನ ಕಾರ್ಯದರ್ಶಿ ಯು.ಎಂ. ಪೂವಯ್ಯ ವಂದಿಸಿದರು.

ಗೌರವಾರ್ಪಣೆ: ಕಾರ್ಯಕ್ರಮಕ್ಕೂ ಮುನ್ನ ಜ.ತಿಮ್ಮಯ್ಯ ವೃತ್ತದಲ್ಲಿರುವ ಜನರಲ್ ತಿಮ್ಮಯ್ಯ ಪ್ರತಿಮೆಗೆ ಮಾಲಾರ್ಪಣೆಗೈದು, ಜಿಲ್ಲಾ ಪೊಲೀಸ್ ವಾದ್ಯ ಗೋಷ್ಠಿಯ ಸಹಿತ ಗೌರವದೊಂದಿಗೆ ಸನ್ನಿಸೈಡ್‍ವರೆಗೆ ಮೆರವಣಿಗೆಯಲ್ಲಿ ಸಾಗÀಲಾಯಿತು. ಕೂಡಿಗೆ ಸೈನಿಕ ಶಾಲಾ ಮಕ್ಕಳು, ಫೀ.ಮಾ. ಕಾರ್ಯಪ್ಪ ಕಾಲೇಜಿನ ಎನ್.ಸಿ.ಸಿ. ತಂಡ ಸಹಿತ ಸಾರ್ವಜನಿಕರು ಪಾಲ್ಗೊಂಡಿದ್ದರು.