ಸುಂಟಿಕೊಪ್ಪ,ಮಾ.31: ಕೊಡಗರಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರಿಟ್ ಮಿಶ್ರಣ ಕೊಂಡೊಯ್ಯುವ ಲಾರಿ ಹಾಗೂ ಕಾರು ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವಿಗೀಡಾಗಿರುವ ದುರ್ಘಟನೆ ಸಂಭವಿಸಿದೆ.ಕೊಡಗರಹಳ್ಳಿಯ ಮಾರುತಿನಗರದ ಬಳಿ ಸುಂಟಿಕೊಪ್ಪ ಕಡೆಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಲಾರಿ (ಕೆಎ12 ಬಿ 4678) ಕುಶಾಲನಗರ ಕಡೆಯಿಂದ ಕೊಡಗರಹಳ್ಳಿಗೆ ಆಗಮಿಸುತ್ತಿದ್ದ ಪಿಯೇಟ್ ಕಾರು (ಕೆಎ 12 ಬಿ 767) ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ; ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉಮ್ಮರ್ ಎಂಬವರ ಪುತ್ರ ಇರ್ಫಾನ್ (22) ಎಂಬಾತ ಸ್ಥಳದಲ್ಲೇ ದುರ್ಮರಣಗೊಂಡಿದ್ದಾನೆ. ಕಾರು ಚಾಲಿಸುತ್ತಿದ್ದ ಸಮ್ಮದ್ (23) ಮುಸ್ತಾಫ ಎಂಬವರ ಮಗ. ಈತ ಮಾರಣಾಂತಿಕ ಗಾಯಗೊಂಡಿದ್ದು, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುತ್ತಿದ್ದ ಸಂದರ್ಭ ಮಾರ್ಗಮದ್ಯೆ ಸಾವನ್ನಪ್ಪಿದ್ದಾನೆ. ಇರ್ಫಾನ್ ಉಪ್ಪುತೋಡು, ಸಮ್ಮದ್ ಕೊಡಗರಹಳ್ಳಿಯ ನಿವಾಸಿಗಳಾಗಿದ್ದು, ಇಬ್ಬರೂ (ಮೊದಲ ಪುಟದಿಂದ) ಸ್ನೇಹಿತರಾಗಿದ್ದರು. ಅವಘಡಕ್ಕೀಡಾದ ಕಾರು ಸಮ್ಮದ್‍ಗೆ ಸೇರಿದ್ದಾಗಿದೆ.ಅಪಘಾತ ಸ್ಥಳದಿಂದ ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ಅಪಘಾತಕ್ಕೀಡಾದ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರ ಆಕ್ರೋಶ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ, ಟಿಪ್ಪರ್‍ನಂತಹ ವಾಹನಗಳು ಅತಿವೇಗದಿಂದ ಸಂಚರಿಸುತ್ತಿವೆ. ಚಾಲಕರ ಅಜಾಗರೂಕತೆ; ಅತಿವೇಗದ ಪರಿಣಾಮ ಅಪಘಾತಗಳು ಸಂಭವಿಸುತ್ತಿವೆ. ಅಪಘಾತ ಸಂದರ್ಭ ಹಲವು ಸಾವು ನೋವುಗಳು ಸಂಭವಿಸುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಈ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು; ವಾಹನಗಳ ತಪಾಸಣೆ ನಡೆಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.