ಸೋಮವಾರಪೇಟೆ,ಮಾ.31: ಮಾ. 27ರಂದು ಆಲೂರು ಸಿದ್ದಾಪುರದಲ್ಲಿ ತನ್ನ ಸ್ವಂತ ದೊಡ್ಡಪ್ಪನ ಮಗನಿಂದ ಕತ್ತಿ ಧಾಳಿಗೆ ಒಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸನದ ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದ ಹರ್ಷಿತ್(23)ನ ಜೀವ ಉಳಿದಿದ್ದು, ಐಸಿಯುನಲ್ಲಿ ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದ ನಂತರ ಸಾಮಾನ್ಯ ವಾರ್ಡ್ಗೆ ರವಾನೆ ಮಾಡಲಾಗಿದೆ.
ಹಾಸನದ ಸ್ಪರ್ಶ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ ನಂತರ ಹರ್ಷಿತ್ ಚೇತರಿಸಿಕೊಂಡಿದ್ದು, ನಿನ್ನೆ ದಿನ ಸಾಮಾನ್ಯ ವಾರ್ಡ್ಗೆ ಸಾಗಿಸಲಾಗಿದೆ. ಮೂವರು ವೈದ್ಯರುಗಳ ಅವಿರತ ಶ್ರಮ, ಅಗತ್ಯ ಚಿಕಿತ್ಸೆಯಿಂದಾಗಿ ಹರ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತನ್ನ ದೊಡ್ಡಪ್ಪನ ಮಗ ದಿಲೀಪ್ನಿಂದ ಮಾರಣಾಂತಿಕ ಧಾಳಿಗೆ ಒಳಗಾಗಿದ್ದ ಹರ್ಷಿತ್, ಜೀವ ಉಳಿಸಿಕೊಂಡಿದ್ದೇ ಪುಣ್ಯ ಎಂದು ಸಂಬಂಧಿಕರು ಅಭಿಪ್ರಾಯಿಸಿದ್ದಾರೆ. ಹರ್ಷಿತ್ನ ಕುತ್ತಿಗೆ, ತಲೆಬುರುಡೆ, ತಲೆಯ ಸುತ್ತಮುತ್ತ, ಭುಜದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದರೆ, ಬಲಗೈ ಹೆಬ್ಬೆರಳು ಹಾಗೂ ಎಡಗೈನ ಎರಡು ಬೆರಳುಗಳು ತುಂಡಾಗಿವೆ.
ಸ್ಪರ್ಶ ಆಸ್ಪತ್ರೆಯ ಡಾ. ಭರತ್ ಮತ್ತು ಅನ್ಮೋಹನ್ ಅವರುಗಳು ತಲೆಭಾಗದ ಗಾಯಗಳಿಗೆ ಚಿಕಿತ್ಸೆ ನೀಡಿದ್ದರೆ, ಡಾ. ವಿನೋದ್ಕುಮಾರ್ ಅವರು ಕೈಗಳಿಗೆ ಚಿಕಿತ್ಸೆ ನೀಡಿದ್ದಾರೆ. ತಲೆ ಭಾಗದಲ್ಲಿ ಉಂಟಾಗಿದ್ದ ಗಾಯಗಳಿಗೆ ಹೊಲಿಗೆ ಹಾಕಲಾಗಿದೆ. ಕೈಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಮೆದುಳು ಹಾಗೂ ನರಮಂಡಲಗಳಿಗೆ ಯಾವದೇ ಗಂಭೀರ ಪೆಟ್ಟಾಗಿಲ್ಲ ಎಂದು ವೈದ್ಯರು ದೃಢಪಡಿಸಿದ್ದು, ಇನ್ನೆರಡು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವದು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಮಾ. 27ರಂದು ಆಲೂರುಸಿದ್ದಾಪುರದ ನಿವೃತ್ತ ಪೊಲೀಸ್ ಅಧಿಕಾರಿ ಸೂದನ ಗಣೇಶ್ ಮತ್ತು ಪತ್ನಿ ಸರೋಜ ಅವರುಗಳನ್ನು, ಗಣೇಶ್ ಅವರ ಅಣ್ಣ ಬೋಜಪ್ಪ ಅವರ ಪುತ್ರ ದಿಲೀಪ್ ಕತ್ತಿಯಿಂದ ಭಯಾನಕವಾಗಿ ಕಡಿದು ಕೊಲೆ ಮಾಡಿದ್ದು, ಇವರ ಪುತ್ರ ಹರ್ಷಿತ್ನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದ. ನಂತರ ಅದೇ ಮನೆಯ ಮಹಡಿಯಲ್ಲಿ ತಾನೂ ಸಹ ನೇಣಿಗೆ ಶರಣಾಗಿದ್ದ.