ವರದಿ: ಎ.ಎನ್. ವಾಸು

ಸಿದ್ದಾಪುರ, ಮಾ. 31: ಜಿಲ್ಲೆಯ ಪ್ರತಿಷ್ಠಿತ ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ನ ನಾಲ್ಕನೇ ಆವೃತಿಯ ಪಂದ್ಯಾವಳಿಗೆ ನೂತನ ಮೈದಾನ ಕಾಮಗಾರಿ ಭರದಿಂದ ಸಾಗಿದ್ದು, ಪಂದ್ಯಾವಳಿಯನ್ನು ನಡೆಸಲು ತಯಾರಿ ನಡೆಸಲಾಗುತ್ತಿದೆ.

ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘ ಕೊಡಗು ಚಾಂಪಿಯನ್ಸ್ ಲೀಗ್ ಎಂಬ ಹೆಸರಿನಲ್ಲಿ ಕಳೆದ ಮೂರು ಆವೃತಿಯ ಯಶಸ್ಸಿನ ಬಳಿಕ ನಾಲ್ಕನೇ ಆವೃತಿಗೆ ತಯಾರಿ ಆರಂಭವಾಗಿದೆ. ಪಂದ್ಯಾವಳಿಯು ಏಪ್ರಿಲ್ 27 ರಿಂದ ಆರಂಭವಾಗಲಿದ್ದು, ಒಟ್ಟು 14 ತಂಡ ಭಾಗವಹಿಸಲಿದೆ. ಐಕಾನ್ ಆಟಗಾರರ ಬಿಡ್ಡಿಂಗ್ ಏ.6 ರಂದು ಹಾಗೂ ಆಟಗಾರರ ಬಿಡ್ಡಿಂಗ್ ಏ. 9 ರಂದು ನಡೆಯಲಿದೆ. ಜಿಲ್ಲೆಯ ಗ್ರಾಮೀಣ ಪ್ರತಿಭೆಗಳಿಗೆ ಕೆ.ಸಿ.ಎಲ್. ಉತ್ತಮ ವೇದಿಕೆಯಾಗಿದ್ದು, ವಿವಿಧ ಭಾಗದಿಂದ ಸುಮಾರು 300 ಕ್ಕೂ ಹೆಚ್ಚು ಆಟಗಾರರು ಅರ್ಜಿ ಸಲ್ಲಿಸುತ್ತಿದ್ದಾರೆ. ಅತಿ ಹೆಚ್ಚು ಅಂಕಗಳಿಸಿದ 4 ತಂಡ ಎಲಿಮಿನೇಟರ್ಸ್ ವಿಭಾಗಕ್ಕೆ ಅರ್ಹತೆ ಪಡೆದುಕೊಳ್ಳಲಿದೆ.

ಕೆ.ಸಿ.ಎಲ್‍ನ ವಿಜೇತ ತಂಡಕ್ಕೆ ಸುಮಾರು 1 ಲಕ್ಷ ರೂ. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುತ್ತಿದ್ದು, ರನ್ನರ್ ತಂಡಕ್ಕೆ ರೂ. 50 ಸಾವಿನ ನಗದು ದೊರೆಯಲಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆ.ಎಸ್.ಸಿ.ಎ) ಅನುಭವಿ ತೀರ್ಪುಗಾರರು ಹಾಗೂ ಸ್ಕೋರರ್‍ಗಳು ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 8 ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡುತ್ತಿರುವದು ಪಂದ್ಯಾವಳಿಯ ವಿಶೇಷತೆ.

ನೂತನ ಮೈದಾನ: ಸಿದ್ದಾಪುರದ ಕರಡಿಗೋಡುವಿನ ಕುಕ್ಕುನೂರು ಪಿ ಪುರುಷೋತ್ತಮ ಹಾಗೂ ದೇವಪ್ರಕಾಶ್ ನೂತನ ಮೈದಾನದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸುಮಾರು 7 ಏಕರೆ ವಿಸ್ತೀರ್ಣ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಮೈದಾನ ಹಾಗೂ ವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ಗುಣಮಟ್ಟದ ಪಿಚ್ ತಯಾರಿಸಲಾಗುತ್ತಿದೆ. ಮೈದಾನಕ್ಕೆ ಕುಕ್ಕುನೂರು ದಿವಂಗತ ಬಾಲಕೃಷ್ಣ ಹಾಗೂ ದಿವಂಗತ ಚೇತನ್ ಸ್ಮರಣಾರ್ಥ ಮೈದಾನ ಎಂದು ನಾಮಕರಣ ಮಾಡಲಾಗಿದೆ.

ತಂಡಗಳು: ಪಂದ್ಯಾವಳಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸುತ್ತಿದ್ದು, ನೆಲ್ಯಹುದಿಕೇರಿಯ ಝಲ್ಲಾ ಕ್ರಿಕೆಟರ್ಸ್, ಗ್ರೀನ್ಸ್ ಕ್ರಿಕೆಟರ್ಸ್, ರೇಂಬೋ ಕ್ರಿಕೆಟರ್ಸ್, ಗೋಣಿಕೊಪ್ಪಲುವಿನ ಬ್ಲ್ಯಾಕ್ ತಂಡರ್, ಆಶ್ಯಸ್, ಸಿದ್ದಾಪುರದ ಟೀಮ್ ಕೂಲ್, ಫಯರ್ ಟೈಗರ್, ಮಡಿಕೇರಿಯ ಸ್ಪೋಟ್ರ್ಸ್ ವಾಲ್ಡ್, ತ್ಯಾಗ್ ಬಾಯ್ಸ್, ಕಳತ್‍ಮಾಡುವಿನ ವಿರಾಟ್ ಕ್ರಿಕೆಟರ್ಸ್, ಬೆಟ್ಟದಕಾಡಿನ ಬ್ಲ್ಯಾಕ್ ವಾರಿಯರ್ಸ್, ಕರಡಿಗೋಡುವಿನ ರಾಯಲ್ ಕುಕ್ಕುನೂರು, ತ್ಯಾಗತ್ತೂರುವಿನ ಕೂರ್ಗ್ ಫ್ರೆಂಡ್ಸ್, ಮೂರ್ನಾಡುವಿನ ಎಸ್.ಆರ್.ಎಸ್. ತಂಡಗಳು ಭಾಗವಹಿಸಲಿವೆ.

ಪಂದ್ಯಾವಳಿಯನ್ನು ಅಂತರ್ರಾಷ್ಟ್ರೀಯ ಅಥ್ಲೀಟ್, ತೀತಮಾಡ ಅರ್ಜುನ್ ದೇವಯ್ಯ ಉದ್ಘಾಟಿಸ ಲಿದ್ದು, ಕೊಡಗು ಚಾಂಪಿಯನ್ಸ್ ಲೀಗ್ ಪಂದ್ಯಾವಳಿಗೆ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಲಿದ್ದಾರೆ. ಪ್ರೋ ಕಬ್ಬಡ್ಡಿ ಆಟಗಾರ ರಿಶಾಂಕ್ ದೇವಾಡಿಗ, ಶಬೀರ್ ಬಾಪು, ಕರ್ನಾಟಕ ರಾಜ್ಯ ರಣಜಿ ತಂಡದ ಆಟಗಾರ ಕೆ.ಬಿ ಪವನ್ ಸೇರಿದಂತೆ ಕನ್ನಡ ಚಿತ್ರರಂಗದ ಕಲಾವಿದÀರು ಬರುವ ನಿರೀಕ್ಷೆಯಿದೆ.