ಮಡಿಕೇರಿ, ಮಾ. 31: ಸಿದ್ದಾಪುರ ಠಾಣೆಯ ಎಎಸ್‍ಐ ಕೆ.ಜೆ. ವಸಂತ್‍ಕುಮಾರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಮಕ್ಕಂದೂರುವಿನ ಹೆಮ್ಮೆತ್ತಾಳು ನಿವಾಸಿ, ಕೆ.ಟಿ. ಅನುಕೂಲ್ ಹಾಗೂ ಆತನ ಪತ್ನಿ ಸೇರಿ ವಸಂತ ಅವರ ಮೊಬೈಲ್‍ಗೆ ತಾ. 27 ರಂದು ಕರೆ ಮಾಡಿದ್ದಲ್ಲದೆ, ಸಂದೇಶ ಕಳುಹಿಸಿ ಉದ್ದೇಶಪೂರ್ವಕವಾಗಿ ಮನೆಗೆ ಬರಮಾಡಿಕೊಂಡು ಹಲ್ಲೆ ನಡೆಸಿರುವದಾಗಿ ಎಎಸ್‍ಐ ಪತ್ನಿ ಪುಕಾರು ನೀಡಿದ್ದಾರೆ.

ಈ ಸಂಬಂಧ ಬಿ.ಎಂ. ರತ್ನಕುಮಾರಿ ನೀಡಿರುವ ಪುಕಾರಿನಲ್ಲಿ ತಾ. 23 ರಂದು ಪತಿ ವಸಂತ್‍ಕುಮಾರ್ ಕರ್ತವ್ಯ ನಿಮಿತ್ತ ಹೆಮ್ಮೆತ್ತಾಳುವಿಗೆ ತೆರಳಿದ ಸಂದರ್ಭ ಉಲ್ಲೇಖಿತ ಮಂದಿಯನ್ನು ಮಾತನಾಡಿಸಿಕೊಂಡು ಬಂದಿರುವರೆಂದು ಸ್ಪಷ್ಟಪಡಿಸಿದ್ದಾರೆ. ಬದಲಾಗಿ ತಾ. 27 ರಂದು ತಾವೇ ಕರೆಸಿಕೊಂಡಿರುವ ಆರೋಪಿತರು ಇತರರೊಡಗೂಡಿ ತೀವ್ರ ಹಲ್ಲೆ ನಡೆಸಿದ್ದಲ್ಲದೇ, ಪತಿಯ ಕೈಬೆರಳಿನಲ್ಲಿದ್ದ ಮೂರು ಚಿನ್ನದ ಉಂಗುರಗಳನ್ನು ಕಸಿದುಕೊಂಡು ಜೀವ ಬೆದರಿಕೆಯೊಡ್ಡಿರುವರೆಂದು ಆರೋಪಿಸಿದ್ದಾರೆ.

ಪ್ರಸಕ್ತ ಪತಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲಸದ ಒತ್ತಡ ಘಟನೆಯಿಂದ ಆತಂಕದೊಂದಿಗೆ ತಕ್ಷಣ ದೂರು ಸಲ್ಲಿಸಲು ಸಾಧ್ಯವಾಗಿಲ್ಲವೆಂದು ಉಲ್ಲೇಖಿಸಿದ್ದಾರೆ. ಇದೀಗ ಮೇಲಿನ ಪ್ರಕರಣ ಕುತೂಹಲಕಾರಿ ತಿರುವು ಪಡೆದುಕೊಂಡಿದೆ.

ಎಸ್‍ಪಿ ಸ್ಪಷ್ಟನೆ : ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪ್ರತಿಕ್ರಿಯಿಸಿ ಉಭಯಕಡೆ ದೂರುಗಳ ಕುರಿತು ಇಲಾಖೆಯಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವದೆಂದು ಭರವಸೆ ನೀಡಿದ್ದಾರೆ.