ಸೋಮವಾರಪೇಟೆ, ಮಾ. 31: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಕಾರ್ಯಕರ್ತರ ಸಭೆ ನಡೆಸುವ ಮೂಲಕ ಬಿರುಸಿನ ಪ್ರಚಾರಕ್ಕೆ ಚಾಲನೆ ನೀಡಿದರು.

ತಾಲೂಕಿನಾದ್ಯಂತ ಬೆಳಗ್ಗಿನಿಂದ ಸಂಜೆಯವರೆಗೂ ಸರಣಿ ಸಭೆಗಳನ್ನು ನಡೆಸಿದ ಪ್ರತಾಪ್ ಸಿಂಹ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಬಿಜೆಪಿ ಮುಖಂಡರುಗಳು, ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆಗೂ ತಲುಪಿಸಿದರು.

ವಿಜಯಶಂಕರ್ ಕೊಡುಗೆ ಏನು?: ತಾನು ಸಂಸದನಾಗಿ ಆಯ್ಕೆಯಾದ ನಂತರ ಕೊಡಗು ಜಿಲ್ಲೆಗೆ ಹಲವಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದು, ಹಲವಷ್ಟು ರಸ್ತೆ ಕಾಮಗಾರಿಗಳು ಇಂದಿಗೂ ಪ್ರಗತಿಯಲ್ಲಿವೆ. ಕೊಡಗಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ಜಾರಿಯಾಗದಂತೆ ಈವರೆಗೆ ನೋಡಿಕೊಂಡಿದ್ದೇನೆ. ಆದರೆ ಈ ಹಿಂದೆ ಸಚಿವರಾಗಿದ್ದ, ಇದೀಗ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಅವರು ಕೊಡಗಿಗೆ ನೀಡಿರುವ ಕೊಡುಗೆಯಾದರೂ ಏನು? ಎಂಬದನ್ನು ಮತದಾರರು ಪ್ರಶ್ನಿಸಬೇಕು ಎಂದು ಪ್ರತಾಪ್ ಸಿಂಹ ನುಡಿದರು.

ಗೌಡಳ್ಳಿ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಪ್ರವಾಹ ಉಂಟಾದ ಸಂದರ್ಭ ತನ್ನ ಶಕ್ತಿ ಮೀರಿ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಕೇಂದ್ರ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ಪರಿಹಾರ ಒದಗಿಸಿದ್ದೇನೆ. ಕೊಡಗಿನಲ್ಲಿ ಸಂತ್ರಸ್ತರಿಗೆ ನೀಡಲು ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ 6ಲಕ್ಷ ನೀಡುತ್ತಿದ್ದರೆ, ರಾಜ್ಯ ಸರ್ಕಾರ 1 ಲಕ್ಷ ವ್ಯಯಿಸುತ್ತಿದೆ. ಪ್ರವಾಹ ಸಂದರ್ಭ ಮರಣವನ್ನಪ್ಪಿದವರಿಗೆ ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್‍ನಿಂದಲೇ ಪರಿಹಾರ ನೀಡಲಾಗಿದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಆಲೂರುಸಿದ್ದಾಪುರ, ತಿತಿಮತಿ, ಅಮ್ಮತ್ತಿ, ಗೋಣಿಕೊಪ್ಪ, ಸುಂಟಿಕೊಪ್ಪದಿಂದ ಜೋಡುಪಾಲ ರಸ್ತೆಯನ್ನು ಕೇಂದ್ರ ಸರ್ಕಾರದ ಅನುದಾನದಿಂದಲೇ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ವಿವಿಧ ಸಮುದಾಯಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ ಎಂದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಪ್ರವಾಹಕ್ಕೆ ತುತ್ತಾದ ಕೊಡಗಿಗೆ ಸರ್ಕಾರದಿಂದ 140 ಕೋಟಿ ಮಾತ್ರ ಬಂದಿದೆ. ಈ ಹಣದಲ್ಲಿ 85 ಕೋಟಿ ಹಣ ಕೇಂದ್ರ ಸರ್ಕಾರದ್ದು. ಸರ್ಕಾರಿ ಸಿಬ್ಬಂದಿಗಳು, ಸಾರ್ವಜನಿಕ ದಾನಿಗಳು 231 ಕೋಟಿ ಧನಸಹಾಯ ನೀಡಿದ್ದರೂ ಕೊಡಗಿಗೆ ಮುಖ್ಯಮಂತ್ರಿಗಳು ಪರಿಹಾರ ಒದಗಿಸುತ್ತಿಲ್ಲ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ಕೊಡಗಿನಲ್ಲಿ ಟಿಪ್ಪು ಜಯಂತಿ ಮಾಡಿಸಿದ ಸಿದ್ದರಾಮಯ್ಯ ಅವರೊಂದಿಗೆ ವಿಜಯಶಂಕರ್ ತೆರಳಿದ್ದು, ಇದೀಗ ಜನರ ಭಾವನೆಗಳ ವಿರುದ್ಧವಾಗಿ ಕೊಡಗಿನಲ್ಲಿ ಚುನಾವಣೆಗೆ ನಿಂತಿದ್ದಾರೆ ಎಂದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೀಶ್, ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್,ರಾಬಿನ್ ದೇವಯ್ಯ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಗೌಡಳ್ಳಿ ಸುನಿಲ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಜಿತೇಂದ್ರ, ಲೋಹಿತ್ ರುದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಲೂಕಿನ ಮಾದಾಪುರ, ಗರ್ವಾಲೆ ವ್ಯಾಪ್ತಿಯ ಕಾರ್ಯಕರ್ತರ ಸಭೆ ಮಾದಾಪುರದ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ನಡೆಯಿತು. ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ ವ್ಯಾಪ್ತಿಯ ಕಾರ್ಯಕರ್ತರ ಸಭೆ ಶಾಂತಳ್ಳಿ ಸಮುದಾಯ ಭವನದಲ್ಲಿ, ಗೌಡಳ್ಳಿ ಮತ್ತು ದೊಡ್ಡಮಳ್ತೆ ವ್ಯಾಪ್ತಿಯ ಸಭೆ ದುರ್ಗಾಪರಮೇಶ್ವರಿ ಸಮುದಾಯ ಭವನದಲ್ಲಿ, ಶನಿವಾರಸಂತೆ, ದುಂಡಳ್ಳಿ, ಹಂಡ್ಲಿ, ಆಲೂರುಸಿದ್ದಾಪುರ, ನಿಡ್ತ ವ್ಯಾಪ್ತಿಯ ಕಾರ್ಯಕರ್ತರ ಸಭೆಯನ್ನು ಶನಿವಾರಸಂತೆಯ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.

ಇದರೊಂದಿಗೆ ಬ್ಯಾಡಗೊಟ್ಟ, ಕೊಡ್ಲಿಪೇಟೆ, ಬೆಸೂರು ವ್ಯಾಪ್ತಿಯ ಕಾರ್ಯಕರ್ತರ ಸಭೆಯನ್ನು ಕೊಡ್ಲಿಪೇಟೆಯ ಮಹಿಳಾ ಸಮಾಜದಲ್ಲಿ, ಸೋಮವಾರಪೇಟೆ, ಚೌಡ್ಲು, ಹಾನಗಲ್ಲು, ಬೇಳೂರು, ಗಣಗೂರು, ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಕಾರ್ಯಕರ್ತರ ಸಭೆಯನ್ನು ಪಟ್ಟಣದ ಕೊಡವ ಸಮಾಜ, ಕಿರಗಂದೂರು, ಐಗೂರು ವ್ಯಾಪ್ತಿಯ ಸಭೆಯನ್ನು ಐಗೂರು ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಆಯೋಜಿಸಿ, ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸುವ ಮೂಲಕ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಪ್ರಮುಖರು ಕರೆ ನೀಡಿದರು.

ಶನಿವಾರಸಂತೆಯಲ್ಲಿ ಸಭೆ

ಕಳೆದ 5 ವರ್ಷದಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರದಿಂದ 13 ಸಾವಿರ ಕೋಟಿ ಅನುದಾನವನ್ನು ಕ್ಷೇತ್ರದ ಅಭಿವೃದ್ದಿಗಾಗಿ ಸದ್ಬಳಕೆ ಮಾಡಿದ್ದೇನೆ ಎಂದು ಕೊಡಗು-ಮೈಸೂರು ಸಂಸದ ಹಾಗೂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‍ಸಿಂಹ ಹೇಳಿದರು.

ಅವರು ಶನಿವಾರಸಂತೆ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶನಿವಾರಸಂತೆ ಹೋಬಳಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. ಕೊಡಗು-ಮೈಸೂರು ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿರುವ ಮೂಲಕ ರಾಜ್ಯದಲ್ಲಿ ನಾನು ಅತಿ ಹೆಚ್ಚು ಸಂಸದರ ಅನುದಾನವನ್ನು ಸದ್ಬಳಕೆ ಮಾಡಿಕೊಂಡಿರುವ ಮೂಲಕ ರಾಜ್ಯಕ್ಕೆ ಮೊದಲ ಸಂಸದನಾಗಿದ್ದೇನೆ ಎಂದರು.

ಕ್ಷೇತ್ರದಲ್ಲಿ ರೈಲ್ವೆ ಸಂಪರ್ಕ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಕೇಂದ್ರದಿಂದ 13 ಸಾವಿರ ಕೋಟಿ ಅನುದಾನದಲ್ಲಿ ಸಮಗ್ರ ಅಭಿವೃದ್ಧಿ ಪಡಿಸಿರುವ ತೃಪ್ತಿ ನನಗಿದೆ ಎಂದರು. ಮೈಸೂರು ಜಿಲ್ಲೆಯಿಂದ ಕೊಡಗಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಸೇರಿದಂತೆ ನಿರೀಕ್ಷೆಗಿಂತ ಮೀರಿ ನಾನು ಅಭಿವೃದ್ಧಿ ಪಡಿಸಿದ್ದೇನೆ ಇದನ್ನು ಹೇಳಿಕೊಳ್ಳುವ ಕಾಲ ಬಂದಿದೆ ಎಂದರು.

ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ನಮ್ಮ ದೇಶವನ್ನು ವಿಶ್ವವೆ ತಿರುಗಿ ನೋಡುತ್ತಿದೆ, ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡುಯ್ಯುತ್ತಿದ್ದಾರೆ, ಏರ್‍ಸ್ಟ್ರೈಕ್, ಸರ್ಜಿಕಲ್ ಸ್ಟೈಕ್ ಮಾಡುವದರ ಮೂಲಕ ಉಗ್ರರನ್ನು ಧ್ವಂಸ ಮಾಡಿದ್ದರೂ ಸಹ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಸಾಧನೆಯನ್ನು ಜನರಲ್ಲಿ ಹಂಚಿಕೊಂಡಿಲ್ಲ ಎಂದರು.

ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ತಾ.ಪಂ. ಸದಸ್ಯ ಕುಶಾಲಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸದಸ್ಯೆ ಸರೋಜಮ್ಮ, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮದ್‍ಗೌಸ್, ತಾ.ಪಂ. ಸದಸ್ಯೆ ಲೀಲಾವತಿ, ಹಿರಿಯ ಬಿಜೆಪಿ ಮುಖಂಡ ಮೆಣಸ ಮಹಾದೇವಪ್ಪ, ಶನಿವಾರಸಂತೆ ಟೌನ್ ಬಿಜೆಪಿ ಅಧ್ಯಕ್ಷ ಯತೀಶ್, ಪ್ರಮುಖರಾದ ಎಚ್.ಎನ್. ರಘು, ರಕ್ಷಿತ್, ಭುವನೇಶ್ವರಿ ಹರೀಶ್ ಮುಂತಾದವರು ಹಾಜರಿದ್ದರು.