ಸೋಮವಾರಪೇಟೆ, ಮಾ. 30: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು.

ಪ್ರಸಕ್ತ ಸಾಲಿನಲ್ಲಿ ಶಾಲೆಯಲ್ಲಿ ಎಲ್.ಕೆ.ಜಿ. ಯು.ಕೆ.ಜಿ. ತರಗತಿ ಪ್ರಾರಂಭಿಸುವದು, ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಕೆಗೆ ಹೆಚ್ಚಿನ ಉತ್ತೇಜನ ನೀಡುವ ಬಗ್ಗೆ ಚರ್ಚಿಸಲಾಯಿತು.

ಒಂದನೇ ತರಗತಿಗೆ ಮಕ್ಕಳ ದಾಖಲಾತಿಗೆ ಸಮಿತಿಯವರು ಸಹಕಾರ ನೀಡುವಂತೆ ಪದವೀಧರ ಮುಖ್ಯ ಶಿಕ್ಷಕಿ ಅಣ್ಣಮ್ಮ ಮನವಿ ಮಾಡಿದರು. ತರಬೇತಿ ಹೊಂದಿದ ಶಿಕ್ಷಕರು, ಸ್ಮಾರ್ಟ್‍ಕ್ಲಾಸ್, ವಾಚನಾಲಯ, ಪ್ರಯೋಗಾಲಯ ದೊಂದಿಗೆ ಉತ್ತಮ ಪರಿಸರವಿದ್ದು, ನಮ್ಮ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಎಸ್‍ಡಿಎಂಸಿ ಅಧ್ಯಕ್ಷ ಕುಶಾಲಪ್ಪ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಿ.ಟಿ. ತಿಮ್ಮಶೆಟ್ಟಿ, ಗೌರವ ಕಾರ್ಯದರ್ಶಿ ಎಸ್.ಡಿ. ವಿಜೇತ್, ಪದಾಧಿಕಾರಿಗಳಾದ ಕೆ.ಎನ್. ಶಿವಕುಮಾರ್, ನ.ಲ. ವಿಜಯ ಉಪಸ್ಥಿತರಿದ್ದರು.