ಕುಶಾಲನಗರ, ಮಾ. 30: ಕುಶಾಲನಗರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಪ್ರಸಕ್ತ ತಹಬದಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾಗಿತ್ತು. ಜಿಲ್ಲಾಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕಾವೇರಿ ನದಿ ಮೂಲದಲ್ಲಿ ಪಂಪ್‍ಸೆಟ್‍ಗಳನ್ನು ಬಳಸದಂತೆ ನಿಷೇದ ಹಾಗೂ ಸೆಕ್ಷನ್ 144 ಅನ್ನು ಜಾರಿಗೊಳಿಸಿದ ಬೆನ್ನಲ್ಲೇ ಸ್ಥಳೀಯ ಪಟ್ಟಣ ಪಂಚಾಯಿತಿ ಮತ್ತು ಜಲಮಂಡಳಿ ಅಧಿಕಾರಿಗಳ ಕಾರ್ಯಾಚರಣೆ ಹಿನ್ನೆಲೆ ನದಿಯಲ್ಲಿ ನೀರಿನ ಹರಿವು ಪ್ರಾರಂಭಗೊಂಡಿದೆ.

ಕುಶಾಲನಗರದಿಂದ ಗುಡ್ಡೆಹೊಸೂರು ತನಕ ನದಿ ತಟದಲ್ಲಿ ಅನಧಿಕೃತವಾಗಿ ಬಳಸುತ್ತಿದ್ದ ಪಂಪ್‍ಸೆಟ್‍ಗಳ ತೆರವು ಮತ್ತು ಅಕ್ರಮವಾಗಿ ನದಿಗೆ ನಿರ್ಮಿಸಲಾಗಿದ್ದ ಬಂಡ್‍ಗಳನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್, ಜಲಮಂಡಳಿ ಅಧಿಕಾರಿ ಆನಂದ್ ನೇತೃತ್ವದಲ್ಲಿ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ತಂಡ ಮೂರು ದಿನಗಳ ಕಾಲ ಬಹುತೇಕ ಪಂಪ್‍ಸೆಟ್‍ಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪಂಪ್‍ಸೆಟ್‍ಗಳಿಗೆ ಕಲ್ಪಿಸಲಾಗಿರುವ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ. ರಾತ್ರಿ ವೇಳೆ ಕಾರ್ಯಾಚರಣೆ ತಂಡ ಅಕ್ರಮ ಪಂಪ್‍ಸೆಟ್‍ಗಳ ಪರಿಶೀಲನೆಗೆ ತೆರಳುತ್ತಿದ್ದು ಕುಡಿಯುವ ನೀರಿಗೆ ಯಾವದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ನದಿಯಲ್ಲಿ ನೀರಿನ ಹರಿವು ಪ್ರಾರಂಭಗೊಂಡ ಕಾರಣ ಕುಶಾಲನಗರ ಬೈಚನಹಳ್ಳಿ ಪಂಪ್‍ಹೌಸ್ ಬಳಿ ನದಿಗೆ ಬಂಡ್ ನಿರ್ಮಿಸಿ ನೀರು ಸಂಗ್ರಹಿಸುವದರೊಂದಿಗೆ ಪಟ್ಟಣಕ್ಕೆ ಎಂದಿನಂತೆ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಲಮಂಡಳಿ ಅಭಿಯಂತರ ಆನಂದ್ ಮಾಹಿತಿ ನೀಡಿದ್ದಾರೆ. ಪಂಪ್‍ಸೆಟ್‍ಗಳ ತೆರವು ಕಾರ್ಯಾಚರಣೆ ಮುಂದುವರೆದಿದ್ದು ಅನಧಿಕೃತವಾಗಿ ಬಳಸಿದಲ್ಲಿ ಜಪ್ತಿ ಮಾಡಿಕೊಳ್ಳುವದರೊಂದಿಗೆ ಅವುಗಳ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದೆಂದು ಅಧಿಕಾರಿಗಳು ತಿಳಿಸಿದ್ದಾರೆ. - ಸಿಂಚು