ಮಡಿಕೇರಿ, ಮಾ. 30: ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ತಾಪಮಾನ ಏರತೊಡಗಿದ್ದು, ಬಿಸಿಲಿನ ತಾಪದಿಂದ ಜೀವ ಸಂಕುಲದ ಮೇಲೂ ಪರಿಣಾಮ ಬೀರುವದರೊಂದಿಗೆ ಕುಡಿಯುವ ನೀರಿನ ದಾಹ ಹೆಚ್ಚಾಗಿದೆ. ಪ್ರಸಕ್ತ ಜನವರಿಯಿಂದ ಇದುವರೆಗೆ, ಇದೇ ತಾ. 25 ರಂದು ಗರಿಷ್ಠ ತಾಪಮಾನ 32.5 ಡಿ.ಸೆ. ಉಷ್ಣಾಂಶ ಗೋಚರಿಸಿದೆ. ಅಂತೆಯೇ ಕಳೆದ ಜನವರಿ 17 ರಂದು ಕನಿಷ್ಟ 7.0 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ.
ಇಲ್ಲಿನ ಕೃಷಿ ಮತ್ತು ತೋಟಗಾರಿಕಾ ಕೇಂದ್ರದ ಲೆಕ್ಕಾಚಾರದಂತೆ ಈ ಅಂಶ ಗೋಚರಿಸಿದ್ದು, ಅನೇಕ ಕಡೆಗಳಲ್ಲಿ ಇದುವರೆಗೆ ಮಳೆ ಬೀಳದಿರುವ ಪರಿಣಾಮ ಉಷ್ಣಾಂಶ ತೀವ್ರಗೊಳ್ಳತೊಡಗಿದೆ. ಸಣ್ಣ ಪುಟ್ಟ ಹೊಳೆ, ತೊರೆಗಳು ಬತ್ತಿ ಹೋಗಿವೆ. ಜಿಲ್ಲೆಯ ಕಾವೇರಿ ಸಹಿತ ಇತರ ಹೊಳೆಗಳ ನೀರಿನ ಮಟ್ಟ ಕುಸಿದಿದೆ. ಬಹಳಷ್ಟು ಕಡೆಗಳಲ್ಲಿ ನೈಸರ್ಗಿಕ ಜಲಮೂಲದ ಕೆರೆ, ತೋಡುಗಳು ಬತ್ತಿ ಹೋಗಿರುವ ಕಾರಣ ಪ್ರಾಣಿ, ಪಕ್ಷಿಗಳಿಗೂ ನೀರಿಗೆ ತಾತ್ವರ ಎದುರಾಗಿದೆ. ಹಲವಷ್ಟು ಗ್ರಾಮೀಣ ರೈತರು ತಮ್ಮ ದನಗಳಿಗೆ ಕುಡಿಯುವ ನೀರು, ಮೇವಿಗಾಗಿ ಪರಿತಪಿಸುತ್ತಿದ್ದಾರೆ.
ಒಂದೆಡೆ ಲೋಕಸಭಾ ಚುನಾವಣೆಯ ಬಿರುಸಿನ ಚಟುವಟಿಕೆಗಳಲ್ಲಿ ಅಧಿಕಾರಿಗಳಿದ್ದು, ಆ ದಿಸೆಯಲ್ಲಿ ಜನಪ್ರತಿನಿಧಿಗಳು ಸೀಮಿತ ಚಟುವಟಿಕೆಗಳಲ್ಲಿ ತೊಡಗುವಂತಾಗಿದೆ. ಹೀಗಾಗಿ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವವರಿಲ್ಲದೆ, ಅಲ್ಲಲ್ಲಿ ಅಸಮಾಧಾನ ಕಾಣುವಂತಾಗಿದೆ. ಹಲವಷ್ಟು ಪಟ್ಟಣಗಳಲ್ಲಿ ಕೂಡ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಜನರು ಕಿ.ಮೀ. ದೂರ ನೀರಿಗಾಗಿ ಅಲೆಯುತ್ತಿದ್ದಾರೆ.
ಮಡಿಕೇರಿ ನಗರದಲ್ಲಿ ಕೂಡ ದಿನ ಬಿಟ್ಟು ದಿನ ನಲ್ಲಿಗಳಲ್ಲಿ ನೀರು ಬರುತ್ತಿದೆಯಾದರೂ, ನಿತ್ಯ ಉಪಯೋಗಕ್ಕೆ ಸರಿದೂಗಿಸಿ ಕೊಳ್ಳುವಷ್ಟು ಪ್ರಮಾಣದಲ್ಲಿ ದೊರಕುತ್ತಿಲ್ಲ ಎಂಬ ಅಸಮಾಧಾನ ಅನೇಕ ಅನೇಕರದ್ದಾಗಿದೆ. ಹೀಗಾಗಿ ಅಲ್ಲಲ್ಲಿ ಮಳೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ, ಹರಕೆಯೊಂದಿಗೆ ಜನರು ತಮ್ಮ ಇಷ್ಟ ದೇವರಿಗೆ ವರುಣನ ಕೃಪೆಗಾಗಿ ಮೊರೆಯಿಡುತ್ತಿದ್ದಾರೆ.
ಮುಂಬರಲಿರುವ ಯುಗಾದಿಯ ತನಕವೂ ಇದೇ ರೀತಿ ತಾಪಮಾನ ಏರಿಕೆಯಾಗುವ ಮಾತು ಕೇಳಿ ಬರತೊಡಗಿದೆ. ಬಹಳಷ್ಟು ಕಡೆಗಳಲ್ಲಿ ಕೃಷಿ ಫಸಲು, ತೋಟಗಾರಿಕಾ ಬೆಳೆಗಳು, ಕಾಫಿ, ಕರಿಮೆಣಸು ಇತ್ಯಾದಿ ನೀರು ಹಾಯಿಸಲು ಅನುಕೂಲವಿಲ್ಲದೆ ಒಣಗುತ್ತಿರುವ ದೃಶ್ಯ ಎದುರಾಗಿದೆ. ಇನ್ನು ಕೆಲವೆಡೆ ಪಂಪ್ಸೆಟ್ ಬಳಸಿ ನೀರು ಹಾಯಿಸಿದರೂ, ಬಳಿಕ ಮಳೆಯಾಗದೆ ಅಂತರ ಉಂಟಾಗಿರುವ ಕಾರಣ ಕೃಷಿಕರು ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ. ಮುಂಗಾರುವಿನಲ್ಲಿ ಪ್ರಕೃತಿಯ ಮುನಿಸಿನೊಂದಿಗೆ ಬೇಸಿಗೆಯ ತಾಪ ಜನತೆಯ ಕಂಗೆಡಿಸಿದೆ.
ಬೆಟ್ಟಗೇರಿ-ಕಾರುಗುಂದ
ಬಿಸಿಲಿನ ಬೇಗೆಗೆ ಬೇಸತ್ತ ಬೆಟ್ಟಗೇರಿ, ಕಾರುಗುಂದ ಭಾಗದ ಬೆಳೆಗಾರರಿಗೆ ದಿಢೀರನೆ ಸುರಿದ ಮಳೆಯಿಂದಾಗಿ ಕೊಂಚ ನೆಮ್ಮದಿ ಪಡುವಂತಾಗಿದೆ. ಕಳೆದ ಕೆಲವು ದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ಕಾಫಿ ಬೆಳೆಗಾರರು ಸಮಾಧಾನಪಡು ವಂತಾಗಿದೆ. ಈ ಭಾಗದಲ್ಲಿ ಗುಡುಗು ಸಹಿತ ಅರ್ಧ ಗಂಟೆ ಮಳೆ ಸುರಿದಿದ್ದು, ಉಳಿದೆಡೆ ಜನತೆ ಮಳೆಯ ನಿರೀಕ್ಷೆಯಲ್ಲಿದ್ದಾರೆ 20 ಮಿ.ಮಿ.ಮಳೆಯಾಗಿದೆ.