ಮಡಿಕೇರಿ, ಮಾ.30 : ಮಡಿಕೇರಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಶ್ರೀ ಮುತ್ತಪ್ಪ ಸ್ವಾಮಿ ಕ್ಷೇತ್ರದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಏ.1ರಿಂದ 3ರವರೆಗೆ ಹಾಗೂ ಶ್ರೀ ಮುತ್ತಪ್ಪ ಜಾತ್ರೆ ಮತ್ತು ದೈವ ಕೋಲಗಳು ಏ.4ರಿಂದ 6ವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ಅವರು, ಪ್ರತೀವರ್ಷ ಏಪ್ರಿಲ್ ತಿಂಗಳ ಮೊದಲ ಗುರುವಾರದಿಂದ ಶನಿವಾರದವರೆಗೆ ಮುತ್ತಪ್ಪ ಜಾತ್ರೆ ಹಾಗೂ ದೈವಕೋಲಗಳನ್ನು ನಡೆಸುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮೂರು ದಿನಗಳ ಕಾಲ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಸಲಾಗುತ್ತದೆ. ಅದರಂತೆ ಈ ಬಾರಿಯ ಮುತ್ತಪ್ಪ ಜಾತ್ರೆ ಹಾಗೂ ದೈವಕೋಲಗಳು ಏ.4ರಂದು ಆರಂಭಗೊಂಡು ಏ.6ರ ಪೂರ್ವಾಹ್ನ 11.30ಕ್ಕೆ ಧ್ವಜಾರೋಹಣದೊಂದಿಗೆ ಮುಕ್ತಾಯವಾಗಲಿದೆ ಎಂದು ಹೇಳಿದರು.

ಏ.4 ರಂದು ಬೆಳಗ್ಗೆ 6 ಗಂಟೆಗೆ ದೇವಾಲಯದ ಆವರಣದಲ್ಲಿ, 7.30ಕ್ಕೆ ನೀರುಕೊಲ್ಲಿ, 8.45ಕ್ಕೆ ಕಡಗದಾಳುವಿನಲ್ಲಿ, 10.45ಕ್ಕೆ ಮರಗೋಡು, ಅಪರಾಹ್ನ 3ಗಂಟೆಗೆ ಸಂಪಿಗೆಕಟ್ಟೆ, 4.30ಕ್ಕೆ ಮೈತ್ರಿಹಾಲ್ ಜಂಕ್ಷನ್‍ನಲ್ಲಿ ಮುತ್ತಪ್ಪ ದೇವರ ಮೋದಕಲಶ ಸ್ಥಾಪನೆ ನಡೆಯಲಿದ್ದು, ಸಂಜೆ 4.30ಕ್ಕೆ ಮುತ್ತಪ್ಪ ದೇವರ ಮಲೆ ಇಳಿಸುವದು, 5.30ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ ಜರುಗಲಿದೆ. ಶಿವಭೂತಂ, ಪೊವ್ವದಿ, ಕುಟ್ಟಿಚಾತನ್, ಮೇಲೇರಿ ಇಲ್ಲದ ಅಲಂಕಾರ ವಿಷ್ಣುಮೂರ್ತಿ ಸೇರಿದಂತೆ ವಿವಿಧ ಹರಕೆ ಕೋಲಗಳನ್ನು ಮಾಡಿಸುವ ಭಕ್ತಾದಿಗಳು ಏ.3ರ ಒಳಗಾಗಿ ದೇವಾಲಯದ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದೆಂದರು.

ಏ.5ರಂದು ಅಪರಾಹ್ನ 3ಗಂಟೆಗೆ ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆಯು ದೇವಾಲಯದಿಂದ ಹಾಗೂ ದೇವಾಲಯದ ನಾಲ್ಕು ದಿಕ್ಕುಗಳಿಂದ ಬರುವ ಕಲಶಗಳೊಡಗೂಡಿ ಸಂಜೆ 5ಗಂಟೆಗೆ ಗಾಂಧಿ ಮೈದಾನದಿಂದ ಹೊರಡಲಿದ್ದು, ನಗರದ ಮುಖ್ಯರಸ್ತೆಯಲ್ಲಿ ಕೇರಳ ಚೆಂಡೆ ವಾದ್ಯ, ಕೋಟೆಬೆಟ್ಟ ಈಶ್ವರ ಕಲಾತಂಡದವರ ದುಡಿಕೊಟ್ ಪಾಟ್ ಹಾಗೂ ವಿವಿಧ ಆಕರ್ಷಕ ಮಂಟಪಗಳೊಂದಿಗೆ ನಡೆಯಲಿದೆ ಎಂದರು.

ಆಕರ್ಷಕ ಕಲಶ ಹಾಗೂ ತಾಲಾಪೊಲಿ ಮೆರವಣಿಗೆಗೆ ಬೆಂಗಳೂರಿನ ಮಕ್ಕಳ ತಜ್ಞ ಡಾ. ಗೌತಮ್ ಆರ್ ಚೌಧರಿ ಅವರು ದೀಪ ಬೆಳಗುವ ಮೂಲಕ ಚಾಲನೆ ನೀಡಲಿದ್ದು, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ನಗರದ ಮಕ್ಕಳ ತಜ್ಞ ಡಾ. ಬಿ.ಸಿ.ನವೀನ್‍ಕುಮಾರ್, ಕುನ್ನತ್ತೂರುಪಾಡಿ ಶ್ರೀ ಮುತ್ತಪ್ಪ ಕ್ಷೇತ್ರದ ಮೇಲಾಯಿಪಾಡಿ ಮುಖ್ಯಸ್ಥ ನಾಯನಾರ್, ಕುಶಾಲನಗರದ ಉದ್ಯಮಿಗಳಾದ ಸುರೇಶ್‍ಕುಮಾರ್ ರಾವಲ್ ಹಾಗೂ ವಿ.ಎಂ.ವಿಜಯ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ನುಡಿದರು.

ಕಲಶ ಹಾಗೂ ತಾಲಾಪೊಲಿ ಮೆರವಣಿಗೆಯಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಭಾಗವಹಿಸಬಹುದಾಗಿದ್ದು, ಮೆರವಣಿಗೆಯಲ್ಲಿ ಭಾಗವಹಿಸುವ 25ಕ್ಕೂ ಅಧಿಕ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಲಕ್ಕಿ ಕೂಪನ್ ಮೂಲಕ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಅಂದು ಸಂಜೆ 4ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, ಬಳಿಕ ಶಾಸ್ತಪ್ಪ ದೇವರ ವೆಳ್ಳಾಟಂ, ಮುತ್ತಪ್ಪ ದೇವರ ವೆಳ್ಳಾಟಂ, ರಾತ್ರಿ 7ಗಂಟೆಯಿಂದ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿಸ್ಪರ್ಶ, ಅನ್ನಸಂತರ್ಪಣೆ, ಪೊವ್ವದಿ ವೆಳ್ಳಾಟಂ, ಶೀವಭೂತ ತೆರೆ, ಗುಳಿಗ, ಕುಟಿಚಾತನ್ ತೆರೆ, ಕಳಗಪಾಟ್, ಸಂದ್ಯಾವೇಲೆ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು, ಏ.6ರ ಬೆಳಗಿನ ಜಾವ 4 ಗಂಟೆಗೆ ಮುತ್ತಪ್ಪ ಮತ್ತು ತಿರುವಪ್ಪ ದೇವರ ತೆರೆ, ವಿಷ್ಣುಮೂರ್ತಿ ದೇವರ ಮೇಲೇರಿಮ, ಪೊವ್ವದಿ ತೆರೆ, ವಿಷ್ಣುಮೂರ್ತಿ ದೇವರ ಬಾರಣೆ ಜರುಗಲಿದ್ದು, ಪೂರ್ವಾಹ್ನ 11.30ಕ್ಕೆ ಧ್ವಜಾರೋಹಣದೊಂದಿಗೆ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯ, ಶ್ರೀ ಅಯ್ಯಪ್ಪ, ಶ್ರೀ ಶಕ್ತಿ ಗಣಪತಿ, ಶ್ರೀ ಭಗವತಿ, ಶ್ರೀ ನಾಗರಾಜ, ಶ್ರೀ ನಾಗಯಕ್ಷಿ, ನಾಗದೇವರ ಬನ, ಮುತ್ತಪ್ಪನ್, ತಿರುವಪ್ಪನ್, ವಿಷ್ಣುಮೂರ್ತಿ, ಮಹಾಗುಳಿಗ, ಶಿವಭೂತಂ, ಶ್ರೀಗುರು, ಪೊವ್ವದಿ, ಕುಟ್ಟಿಚಾತನ್, ಯಕ್ಷಿ ಸೇರಿದಂತೆ ಸುಮಾರು 14 ದೇವಾನುದೇವತೆಗಳ ಸಾನಿಧ್ಯವಿದ್ದು, ಕ್ಷೇತ್ರಕ್ಕೆ ಭಕ್ತಾದಿಗಳು ಮದ್ಯಪಾನ ಹಾಗೂ ಮಾಂಸಾಹಾರ ಸೇವಿಸಿ ಬರುವಂತಿಲ್ಲ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಪುನರ್ ಪ್ರತಿಷ್ಠಾ ಕಾರ್ಯಕ್ರಮಗಳು: ಕ್ಷೇತ್ರದಲ್ಲಿ ಏ.1ರಿಂದ 3ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಕುರಿತು ಮಾಹಿತಿ ನೀಡಿದ ಮುತ್ತಪ್ಪ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ರಾಮನ್ ಅವರು, ಏ.1ರ ಸಂಜೆಯಿಂದ ಕೇರಳದ ಪಂದಳಂನ ಶ್ರೀ ಮಾಂಗೂರು ಪಾರ್ಥಸಾರಥಿ ಸ್ಕಂದನ್ ತಂತ್ರಿಗಳ ನೇತೃತ್ವದಲ್ಲಿ ದೈವಿಕ ಕಾರ್ಯಗಳು ಆರಂಭವಾಗಲಿದ್ದು, ಅಂದು ಸಂಜೆ 5ಗಂಟೆಗೆ ಪ್ರಾರ್ಥನೆ, ಬಳಿಕ ಪ್ರಾಸಾದ ಶುದ್ಧಿ, ಗಣಹೋಮ, ಕುಂಭಾಭಿಷೇಕ, ವಾಸ್ತುಹೋಮ, ವಾಸ್ತುಬಲಿ. ರಾತ್ರಿ 8.30ಕ್ಕೆ ಸುದರ್ಶನ ಹೋಮ ಜರುಗಲಿದೆ ಎಂದರು.

ಏ.2ರಂದು ಬೆಳಗ್ಗೆ 7ಗಂಟೆಗೆ 108 ತೆಂಗಿನ ಕಾಯಿಗಳ ಮಹಾಗಣಪತಿ ಹೋಮ, ಬಳಿಕ ಕಲಶಪೂಜೆ, ಸುಬ್ರಹ್ಮಣ್ಯ ದೇವರಿಗೆ ಅಷಾಭಿಷೇಕ, ಅಯ್ಯಪ್ಪ ದೇವರಿಗೆ ತುಪ್ಪಾಭಿಷೇಕ, ಮಧ್ಯಾಹ್ನ 12 ಗಂಟೆಗೆ ನಾಗದೇವರಿಗೆ ತಂಬಿಲ ಸಮರ್ಪಣೆ ನಡೆಯಲಿದ್ದು, ಅಂದು ಸಂಜೆ 6.30ಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ನಗರದ ರೇಡಿಯೋಲಜಿಸ್ಟ್ ಡಾ. ಚೌರಿರ ಶ್ಯಾಂ ಅಪ್ಪಣ್ಣ, ಬೆಂಗಳೂರಿನ ಉದ್ಯಮಿ ತೇನನ ರಾಜೇಶ್ ಸೋಮಣ್ಣ, ಮಡಿಕೇರಿಯ ಶಸ್ತ್ರಚಿಕಿತ್ಸಕ ಡಾ. ಮನೋಹರ್ ಜಿ.ಪಾಟ್ಕರ್, ಕಡಗದಾಳುವಿನ ಕಾಫಿ ಬೆಳೆಗಾರ ಟಿ.ಆರ್.ವಾಸುದೇವ್, ಗುತ್ತಿಗೆದಾರ ಜಿ.ಕಿಶೋರ್‍ಬಾಬು, ಉದ್ಯಮಿ ಎಂ.ಎ.ಹಮೀದ್, ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಗಜಾನನ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಂದು ಸಂಜೆ 6.30ಕ್ಕೆ ಪಾರ್ವತಿ ದೇವಿಗೆ ದೀಪಾರಾಧನೆ ಮತ್ತು ಪುಷ್ಪಾಭಿಷೇಕ ಜರುಗಲಿದೆ ಎಂದು ವಿವರಿಸಿದರು.

ಏ.3ರ ಬೆಳಗ್ಗೆ 7.30ಕ್ಕೆ ಗಣಹೋಮ, ಬಳಿಕ ಮಹಾ ಮೃತ್ಯುಂಜಯ ಹೋಮ. 11 ಗಂಟೆಗೆ ಮಹಾಪೂಜೆ, 12ಗಂಟೆಗೆ ಭೂತಬಲಿ, ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿ ಅಧ್ಯಕ್ಷ ಎಸ್.ಸುರೇಶ್, ಕಾರ್ಯಾಧ್ಯಕ್ಷ ಆರ್. ಗಿರೀಶ್, ಸದಸ್ಯ ಕೆ.ವಿ.ಸುಬ್ರಮಣಿ ಹಾಗೂ ಮೆರವಣಿಗೆ ಸಮಿತಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಉಪಸ್ಥಿತರಿದ್ದರು.