ಸೋಮವಾರಪೇಟೆ, ಮಾ. 29: ತಾ. 27ರಂದು ತನ್ನ ಸ್ವಂತ ದೊಡ್ಡಪ್ಪನ ಮಗನಿಂದ ಕತ್ತಿ ಧಾಳಿಗೆ ಒಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಸನದ ಆಸ್ಪತ್ರೆಗೆ ಸಾಗಿಸಲ್ಪಟ್ಟಿರುವ ಹರ್ಷಿತ್(23)ಗೆ ಚಿಕಿತ್ಸೆ ಮುಂದುವರೆ ದಿದ್ದು, ಪೋಷಕರ ಸಾವಿನ ಸುದ್ದಿಯನ್ನು ಗೌಪ್ಯವಾಗಿಟ್ಟು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.ಹಾಸನದ ಸ್ಪರ್ಶ ಆಸ್ಪತ್ರೆಯಲ್ಲಿ ಐಸಿಯುನಲ್ಲಿರುವ ಹರ್ಷಿತ್‍ಗೆ ಮೂವರು ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಜೀವ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ನಿನ್ನೆ ದಿನ ಕೈಗಳ ಶಸ್ತ್ರ ಚಿಕಿತ್ಸೆಯನ್ನು ನಡೆಸಿರುವ ವೈದ್ಯರು, ಇನ್ನೆರಡು ದಿನದಲ್ಲಿ ತಲೆ ಭಾಗದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲು ಸಿದ್ಧತೆ ಕೈಗೊಂಡಿದ್ದಾರೆ.ತಾ. 27ರಂದು ಆಲೂರುಸಿ ದ್ದಾಪುರದ ನಿವೃತ್ತ ಪೊಲೀಸ್ ಅಧಿಕಾರಿ ಸೂದನ ಗಣೇಶ್ ಮತ್ತು ಪತ್ನಿ ಸರೋಜ ಅವರುಗಳನ್ನು, ಗಣೇಶ್ ಅವರ ಅಣ್ಣ ಬೋಜಪ್ಪ ಅವರ ಪುತ್ರ (ಮೊದಲ ಪುಟದಿಂದ) ದಿಲೀಪ್ ಕತ್ತಿಯಿಂದ ಭಯಾನಕವಾಗಿ ಕಡಿದು ಕೊಲೆ ಮಾಡಿದ್ದು, ಇವರ ಪುತ್ರ ಹರ್ಷಿತ್‍ನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದ. ನಂತರ ಅದೇ ಮನೆಯ ಮಹಡಿಯಲ್ಲಿ ತಾನೂ ಸಹ ನೇಣಿಗೆ ಶರಣಾಗಿದ್ದ.ತನ್ನ ದೊಡ್ಡಪ್ಪನ ಮಗನಿಂದಲೇ ಮಾರಣಾಂತಿಕ ಹಲ್ಲೆಗೆ ಒಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರ್ಷಿತ್‍ನನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಜೀವ ಉಳಿದಿದೆ. ದೇಹದ ಇತರ ಭಾಗಗಳಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ತಾ. 27ರಂದು ಸಂಜೆ 5.30ಗಂಟೆ ಸುಮಾರಿಗೆ ಮನೆಗೆ ಆಗಮಿಸಿದ ಹರ್ಷಿತ್, ಮುಂಭಾಗದ ಬಾಗಿಲು ಮುಚ್ಚಲ್ಪಟ್ಟಿದ್ದನ್ನು ಗಮನಿಸಿದ್ದು, ಮನೆಯೊಳಗೆ ದಿಲೀಪ್ ಇರುವ ಬಗ್ಗೆ ಕಿಟಕಿಯಿಂದ ನೋಡಿದ್ದಾನೆ. ತನ್ನ ಪೋಷಕರಿಗೆ ಏನಾದರೂ ಮಾಡಬಹುದು ಎಂಬ ಸಂದೇಹದಿಂದ ಮನೆಯ ಹಿಂಬಾಗಿಲಿನಿಂದ ಒಳ ಪ್ರವೇಶಿಸುತ್ತಿದ್ದಂತೆ, ಹರ್ಷಿತ್‍ನ ಮೇಲೆ ಮನುಷ್ಯತ್ವವನ್ನೇ ಕಳೆದುಕೊಂಡಿದ್ದ ದಿಲೀಪ್ ಮುಗಿಬಿದ್ದಿದ್ದು, ಕತ್ತಿಯಿಂದ ಮನಸೋಯಿಚ್ಛೆ ಕಡಿದಿದ್ದಾನೆ.

ದಿಢೀರ್ ಧಾಳಿಯಿಂದ ಕುಸಿದು ಬಿದ್ದ ಹರ್ಷಿತ್‍ನ ಮೇಲೆ ಮತ್ತೆ ಮತ್ತೆ ಧಾಳಿ ನಡೆದಿದ್ದು, ಕುತ್ತಿಗೆ, ತಲೆಬುರುಡೆ, ತಲೆಯ ಸುತ್ತಮುತ್ತ, ಭುಜದ ಭಾಗಕ್ಕೆ ಕಡಿದಿದ್ದಾನೆ. ಇದರೊಂದಿಗೆ ಕೈಗಳಿಗೆ ತೀವ್ರ ಗಾಯವಾಗಿದ್ದು, ಬಲಗೈ ಹೆಬ್ಬೆರಳು ಹಾಗೂ ಎಡಗೈನ ಎರಡು ಬೆರಳುಗಳು ತುಂಡಾಗಿವೆ. ನೇತಾಡುತ್ತಿದ್ದ ಕಿವಿಯೊಂದಿಗೆ ಹರ್ಷಿತ್‍ನನ್ನು ಶನಿವಾರಸಂತೆ ಆಸ್ಪತ್ರೆಗೆ ಸಾಗಿಸಲಾಗಿದೆ.

ನಂತರ ಗಾಯಾಳುವನ್ನು ಹಾಸನದ ಸ್ಪರ್ಶ ಆಸ್ಪತ್ರೆಗೆ ದಾಖಲಿಸಿದ ಮೇರೆ, ಅಲ್ಲಿ ನೇತಾಡುತ್ತಿದ್ದ ಕಿವಿಗೆ ಹೊಲಿಗೆ ಹಾಕಿ, ತಲೆ ಭಾಗಕ್ಕೆ ಬ್ಯಾಂಡೇಜ್ ಮಾಡಲಾಯಿತು. ನಿನ್ನೆ ದಿನ ಹರ್ಷಿತ್‍ನ ಕೈಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಪ್ರಜ್ಞೆಯೂ ಬಂದಿದೆ ಎಂದು ಆತನ ಬಾವ ಅನಿಲ್ ತಿಳಿಸಿದ್ದಾರೆ.

ಕೈ ಭಾಗಕ್ಕೆ ಯದ್ವಾತದ್ವ ಕಡಿದಿರುವದರಿಂದ ಅನೇಕ ನರಗಳು ತುಂಡಾಗಿವೆ. ತಲೆ ಭಾಗದಲ್ಲೂ ಹಲವಷ್ಟು ನರಗಳು ತುಂಡರಿಸಲ್ಪಟ್ಟಿದ್ದು, ಇನ್ನೂ ಒಂದೆರಡು ದಿನದಲ್ಲಿ ತಲೆ ಭಾಗದ ಸ್ಕ್ಯಾನಿಂಗ್ ನಡೆಸಿ, ಶಸ್ತ್ರ ಚಿಕಿತ್ಸೆ ಅವಶ್ಯಕತೆಯಿದೆಯೇ ಎಂಬ ಬಗ್ಗೆ ವೈದ್ಯರು ಅಭಿಪ್ರಾಯಿಸಲಿದ್ದಾರೆ. ಈಗಾಗಲೇ ಸುಮಾರು 1 ಲಕ್ಷದಷ್ಟು ಹಣ ಚಿಕಿತ್ಸೆಗೆ ವ್ಯಯವಾಗಿದ್ದು, ಮುಂದಿನ ಚಿಕಿತ್ಸೆಗಳಿಗೂ ಸಾಕಷ್ಟು ಹಣದ ಅವಶ್ಯಕತೆ ಉಂಟಾಗಿದೆ.

ಹರ್ಷಿತ್‍ಗೆ ಮೂವರು ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಡಾ. ಭರತ್ ಮತ್ತು ಅನ್‍ಮೋಹನ್ ಅವರುಗಳು ತಲೆಭಾಗ ಹಾಗೂ ಡಾ. ವಿನೋದ್‍ಕುಮಾರ್ ಅವರು ಕೈಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇಂದಿಗೂ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆಗೆ ಒಳಗಾಗಿರುವ ಹರ್ಷಿತ್‍ನ ಜೀವಕ್ಕೆ ತೊಂದರೆಯಿಲ್ಲ. ತಲೆ ಭಾಗದ ಸಂಪೂರ್ಣ ಸ್ಕ್ಯಾನಿಂಗ್ ನಡೆಸಿದ ನಂತರವಷ್ಟೇ ಮೆದುಳು ಹಾಗೂ ನರಮಂಡಲಗಳಿಗೆ ಪೆಟ್ಟಾಗಿದೆಯೇ ಎಂಬದನ್ನು ಕಂಡುಕೊಳ್ಳಬೇಕಿದೆ ಎಂದು ವೈದ್ಯರುಗಳು ಅಭಿಪ್ರಾಯಿಸಿದ್ದಾರೆ.

ತಾ. 27ರ ಸಂಜೆ 5.30ರ ಸುಮಾರಿಗೆ ಹಲ್ಲೆ ನಡೆದ ನಂತರ ಜೀವನ್ಮರಣ ಸ್ಥಿತಿಗೆ ತಲಪಿದ ಹರ್ಷಿತ್‍ಗೆ ನಂತರ ಆಗಿರುವ ಯಾವೊಂದೂ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲ. ತನ್ನ ತಂದೆ ತಾಯಿ ಇಹಲೋಕ ತ್ಯಜಿಸಿರುವ ಬಗ್ಗೆಯೂ ಅರಿವಿಲ್ಲ. ಹಂತಕ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡಿರುವದು, ನಿನ್ನೆ ದಿನ ಆತನ ಪೋಷಕರ ಅಂತ್ಯಸಂಸ್ಕಾರ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಶೋಕಸಾಗರದಲ್ಲಿ ನಡೆದಿರುವ ಬಗ್ಗೆಯೂ ಗೊತ್ತಿಲ್ಲ.

ಈ ಹಿಂದೆ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಹರ್ಷಿತ್, ಅಲ್ಲಿ ಕೆಲಸ ಬಿಟ್ಟು ಕಳೆದ 1 ವಾರದ ಹಿಂದಷ್ಟೇ ಕುಶಾಲನಗರದ ಹಿಂದೂಸ್ಥಾನ್ ಏಜೆನ್ಸಿಯೊಂದರಲ್ಲಿ ಮಾರ್ಕೆಟಿಂಗ್ ಕೆಲಸಕ್ಕೆ ಸೇರಿಕೊಂಡಿದ್ದ. ಅಪ್ಪನಿಗೆ ಬರುವ ಮಾಸಾಶನ, ಇದ್ದ ಗದ್ದೆಯನ್ನು ಭೋಗ್ಯಕ್ಕೆ ನೀಡಿರುವದರಿಂದ ದೊರಕುವ ಅಲ್ಪ ಹಣದಲ್ಲಿ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದ್ದರಿಂದ ಹೊಸದಾಗಿ ಕೆಲಸಕ್ಕೆ ಸೇರಿಕೊಂಡು ಸಂಪಾದನೆಯ ದಾರಿ ಹುಡುಕಿಕೊಂಡಿದ್ದ. ಆದರೆ ವಿಧಿಯ ಆಟದೆದುರು ಪೋಷಕರನ್ನು ಕಳೆದುಕೊಂಡು, ಇದೀಗ ಪೈಶಾಚಿಕ ಮನಸ್ಸಿನವನ ಧಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಈತನೊಂದಿಗೆ ಬಾವ ಅನಿಲ್ ಅವರು ಆಸ್ಪತ್ರೆಯಲ್ಲಿದ್ದು, ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.

ಕೇವಲ 40 ಸೆಂಟ್ಸ್ ಜಾಗಕ್ಕೆ ಎರಡು ಹಿರಿ ಜೀವಗಳು ಕತ್ತಿಯೇಟಿಗೆ ಬಲಿಯಾಗಿದ್ದರೆ, ಪೈಶಾಚಿಕ ಮನಸ್ಸಿನ ಹಂತಕನೂ ಸತ್ತಿದ್ದಾನೆ. ಸ್ಪುರದ್ರೂಪಿ ಯುವಕ ಹರ್ಷಿತ್ ತನ್ನ 23ನೇ ವಯಸ್ಸಿನಲ್ಲಿ ವಿಕೃತಮನಸ್ಸಿನ ಹಂತಕನ ಧಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಲೂರುಸಿದ್ದಾಪುರದ ಮನೆಯಲ್ಲಿ ಶೋಕ ಇನ್ನೂ ಮಡುಗಟ್ಟಿದೆ. - ವಿಜಯ್ ಹಾನಗಲ್