ಮಡಿಕೇರಿ, ಮಾ.29: ಹತ್ತು ದಿನಗಳ ಹಿಂದೆ ಮೇಕೇರಿ - ತಾಳತ್‍ಮನೆ ಮಾರ್ಗದಲ್ಲಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಸಂಜೆಗತ್ತಲೆ ನಡುವೆ ರಸ್ತೆ ಅಪಘಾತದಲ್ಲಿ ನಿಗೂಢ ರೀತಿ ಸಾವನ್ನಪ್ಪಿದ ಪ್ರಕರಣ ಕೊಲೆಯೆಂದು ಸಾಬೀತಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಡಾ. ಸುಮನ್ ಡಿ.ಪಿ. ಸ್ಪಷ್ಟಪಡಿಸಿದ್ದಾರೆ. ಈ ಸಂಜೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಬಹಿರಂಗಗೊಳಿಸಿದ ಅವರು, ಮೂವರು ಆರೋಪಿಗಳು ವೈಯಕ್ತಿಕ ದ್ವೇಷದಿಂದ ಸುಮಾರು ಒಂದು ತಿಂಗಳಿನಿಂದ ಸಂಚು ರೂಪಿಸಿ ವ್ಯವಸ್ಥಿತವಾಗಿ ಕೊಲೆಗೈದು, ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿರುವದಾಗಿ ಮಾಹಿತಿ ನೀಡಿದರು.

ಬಾಲಚಂದ್ರ ಕಳಗಿ ಅವರನ್ನು ಸಂಚು ರೂಪಿಸಿ ಹತ್ಯೆಗೈದಿರುವ ಆರೋಪದಡಿ ಸಂಪಾಜೆ ವ್ಯಾಪ್ತಿಯ ಚೆಂಬು ಗ್ರಾಮದ ಅಪ್ಪುಕುಞ್ಞ ಎಂಬವರ ಪುತ್ರ ಸಂಪತ್‍ಕುಮಾರ್ (34) ಪ್ರಥಮ ಆರೋಪಿಯೆಂದು ಎಸ್‍ಪಿ ತಿಳಿಸಿದರು. ಎರಡನೆಯ ಆರೋಪಿ ಲಾರಿ ಚಾಲಕ ಜಯನ್ ಅಲಿಯಾಸ್ ಜಗ್ಗು (34) ಬಂಧಿತನಾಗಿದ್ದಾನೆ. ಗುಡ್ಡೆಹೊಸೂರು ಬಳಿ ಬೊಳ್ಳೂರುವಿನ ಕೃಷ್ಣನ್ ಎಂಬವರ ಪುತ್ರನಾಗಿರುವ ಆರೋಪಿ, ಹಾಲಿ ನಗರದ ಗೌಳಿಬೀದಿ ನಿವಾಸಿಯಾಗಿದ್ದಾಗಿ ವಿವರಿಸಿದರಲ್ಲದೆ, ಮೂರನೆಯ ಆರೋಪಿ ಸಂಪಾಜೆಯ ಕೆ. ಹರಿಪ್ರಸಾದ್ (36) ಅಲ್ಲಿನ ನಿವಾಸಿ ದಿ. ಕೃಷ್ಣನ್ ಎಂಬವರ ಪುತ್ರನೆಂದು ಮಾಹಿತಿಯಿತ್ತರು.ದೂರಿನ ಮೇರೆಗೆ ತನಿಖೆ : ತಾ. 19 ರಂದು ಅಪಘಾತ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ; ಪೊಲೀಸ್ ಮೊಕದ್ದಮೆಯು 45/2019ರ ಕಲಂ 304 (ಎ) 279 ಐಪಿಸಿ ಕಾಯ್ದೆಯಡಿ ಅಪಘಾತ ಪ್ರಕರಣ ದಾಖಲಾಗಿತ್ತು; ಮೃತರ ಚಿಕ್ಕಪ್ಪ ರಾಜಾರಾಮ ಕಳಗಿ ಅವರು, ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ ಮೇರೆಗೆ ಮೊಕದ್ದಮೆ ಸಂಬಂಧ ಶಂಕಿತರ ಕುರಿತ ತನಿಖೆ ಕೈಗೊಂಡಿದ್ದಾಗಿ ಎಸ್‍ಪಿ ವಿವರಿಸಿದರು.

ವ್ಯವಸ್ಥಿತ ಸಂಚು ಬೆಳಕಿಗೆ: ಈ ಸಂದರ್ಭ ದೂರಿನಲ್ಲಿ ವ್ಯಕ್ತಗೊಂಡಿದ್ದ ಸಂಶಯದ ಕುರಿತ ಶಂಕಿತ ವ್ಯಕ್ತಿಗಳನ್ನು ಗುಮಾನಿಯ ಮೇರೆಗೆ ವಿಚಾರಣೆಗೆ ಒಳಪಡಿಸಲಾಗಿ ಇದೊಂದು ಪೂರ್ವ ನಿಯೋಜಿತ ಕೊಲೆಯೆಂದು ಖಾತರಿ ಯಾಗಿದೆ ಎಂದ ಡಾ. ಸುಮನ್, ಇದೀಗ ಆರೋಪಿಗಳ ವಿರುದ್ಧ ಪೊಲೀಸ್ ಕಾಯ್ದೆ 302ರ ಅಡಿಯಲ್ಲಿ ಕೊಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಅಲ್ಲದೆ ಭಾರತೀಯ ಪೊಲೀಸ್ ಕಾಯ್ದೆ 201ರ ಅಡಿಯಲ್ಲಿ ದುಷ್ಕøತ್ಯದ ಬಳಿಕ ಸಾಕ್ಷ್ಯ ನಾಶ ಯತ್ನ ಸಂಬಂಧ ಕ್ರಮ ಜರುಗಿಸಲಾಗಿದೆ; ಮಾತ್ರವಲ್ಲದೆ ಈ ಮೂವರು ಒಳಸಂಚು ರೂಪಿಸಿ ಕೃತ್ಯ ಎಸಗಿರುವದ್ದನ್ನು ಒಪ್ಪಿ ಕೊಂಡಿರುವ ಕಾರಣದಿಂದ ಐಪಿಸಿ 120 (ಬಿ) ಮತ್ತು ಆರ್/ ಡಬ್ಲ್ಯು

34 ಕಾಯ್ದೆ

(ಮೊದಲ ಪುಟದಿಂದ) ಮುಖಾಂತರ ಮೊಕದ್ದಮೆ ದಾಖಲಿಸಿ ಕೊಂಡಿರುವದಾಗಿ ತಿಳಿಸಿದರು.

ದುಷ್ಕøತ್ಯಕ್ಕೆ ಕಾರಣ : ಎರಡು ವರ್ಷಗಳ ಹಿಂದೆ ಸಂಪಾಜೆಯಲ್ಲಿ ಬಂಧಿತ ಆರೋಪಿಗಳಾದ ಸಂಪತ್ ಕುಮಾರ್ ಹಾಗೂ ಹರಿಪ್ರಸಾದ್ ರಿಕ್ರಿಯೇಶನ್ ಕ್ಲಬ್ ತೆರೆಯಲು ಯತ್ನಿಸಿದ್ದು, ಆ ಸಂದರ್ಭ ಅಲ್ಲಿನ ಗ್ರಾ.ಪಂ. ಅಧ್ಯಕ್ಷರಾಗಿದ್ದ ಬಾಲಚಂದ್ರ ಕಳಗಿ ಅನುಮತಿ ನಿರಾಕರಿಸಿದ್ದಾರೆ; ಆ ಮೇರೆಗೆ ಆರೋಪಿಗಳು ದ್ವೇಷ ಸಾಧಿಸುತ್ತಿದ್ದುದ್ದಾಗಿ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಗೋಷ್ಠಿಯಲ್ಲಿ ಎಸ್‍ಪಿ ತಿಳಿಸಿದರು.

ಅಲ್ಲದೆ, ಕಳೆದ ವರ್ಷ ಮಾರ್ಚ್‍ನಲ್ಲಿ ಸಂಪಾಜೆಯಲ್ಲಿ ಬಾರ್ ತೆರೆಯುವ ಯತ್ನ ನಡೆಸಿದ ವೇಳೆ, ಮತ್ತೆ ವಿರೋಧ ವ್ಯಕ್ತಪಡಿಸಿರುವ ಕಳಗಿ ಜನರನ್ನು ಸಂಘಟಿಸಿ ಪ್ರತಿಭಟನೆ ಯೊಂದಿಗೆ ಬಾರ್ ನಡೆಸಲು ಹೊಂದಿದ್ದ ಆರೋಪಿಗಳ ಪರವಾನಗಿ ರದ್ದುಗೊಳ್ಳುವಂತೆ ಮಾಡಿರುವದು ಕೊಲೆಗೆ ಇನ್ನೊಂದು ಕಾರಣವಾಗಿ ದ್ದಾಗಿ ತನಿಖೆಯಿಂದ ಗೊತ್ತಾಗಿದೆ ಎಂದರು. ಮತ್ತೊಂದೆಡೆ ಆರೋಪಿ ಸಂಪತ್‍ಕುಮಾರ್‍ಗೆ ಸೇರಿದ್ದೆನ್ನಲಾದ ಜೆಸಿಬಿ ಯಂತ್ರವೊಂದು ಕಳ್ಳತನ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ವೇಳೆಯೂ, ಅಲ್ಲಿನ ಪೊಲೀಸರ ಮೇಲೆ ಹಿಂದಿನ ಸಂಪಾಜೆ ಗ್ರಾ.ಪಂ. ಅಧ್ಯಕ್ಷರು ತನಿಖೆಗೆ ಅಡ್ಡಿಪಡಿಸಿದ ದ್ವೇಷ ಕಟ್ಟಿಕೊಂಡಿದ್ದಾಗಿ ತನಿಖೆ ವೇಳೆ ಗೊತ್ತಾಗಿರುವದಾಗಿ ಗೋಷ್ಠಿಯಲ್ಲಿ ತಿಳಿಸಿದರು.

ದುಷ್ಕøತ್ಯಕ್ಕೆ ಸಂಚು: ತಮ್ಮ ಅಕ್ರಮಗಳಿಗೆ ಸದಾ ಅಡ್ಡಿಯಾಗುತ್ತಿದ್ದ ಕಳಗಿ ಅವರನ್ನು ಮುಗಿಸಲು ಸಂಪತ್ ಹಾಗೂ ಹರಿಪ್ರಸಾದ್ ಸಂಚು ರೂಪಿಸುತ್ತಾರೆ. ಸ್ನೇಹಿತ ಜಯನನ್ನು ಬಳಸಿಕೊಂಡು ಆತನ ಲಾರಿ ಸಂಬಂಧ ಬ್ಯಾಂಕ್ ಸಾಲ ರೂ. 1.50 ಲಕ್ಷವನ್ನು ತಾವು ತೀರಿಸುದಾಗಿಯೂ, ಅದಕ್ಕೆ ಪ್ರತಿಯಾಗಿ ಮುಂದೆ ಕಳಗಿ ಅವರನ್ನು ಅಪಘಾತದ ಮೂಲಕ ಕೊಲ್ಲುವಂತೆ ಮನವೊಲಿಸುತ್ತಾರೆ.

ತಾ. 19 ರಂದು ಕೊಲೆ : ಈ ಎಲ್ಲ ಕಾರಣಗಳಿಂದ ತಾ. 19 ರಂದು ಆರೋಪಿ ಸಂಪತ್‍ಕುಮಾರ್ ತನ್ನ ಕಾರಿನಲ್ಲಿ (ಕೆ.ಎ. 19 ಎಂಇ 2687) ಬಾಲಚಂದ್ರ ಕಳಗಿ ಅವರನ್ನು ಸಂಪಾಜೆಯಿಂದ ಹಿಂಬಾಲಿಸಿಕೊಂಡು ಬಂದಿದ್ದಾನೆ. ಮಡಿಕೇರಿಯಲ್ಲಿ ಕಳಗಿ ಚಲನ ವಲನ ಗಮನಿಸುತ್ತಾ, ಲಾರಿ (ಕೆ.ಎ. 12 ಎ. 6253) ಚಾಲಕ ಜಯನನ್ನು ಮೊಬೈಲ್‍ನಲ್ಲಿ ಸಂಪರ್ಕಿಸಿ; ಕೃತ್ಯಕ್ಕೆ ಸೂಚನೆ ನೀಡುತ್ತಾರೆ. ಅಂತೆಯೇ ಸುಪಾರಿ ಪಡೆದ ಲಾರಿ ಚಾಲಕ; ಸಂಜೆ ಮೇಕೇರಿ ಕಡೆಯಿಂದ ಸಂಪಾಜೆಗೆ ಹೊರಟಿದ್ದ ಬಾಲಚಂದ್ರ ಕಳಗಿ ಅವರ ಕಾರು (ಕೆ.ಎ. 12 ಎನ್. 4085) ಬರುವ ದಿಕ್ಕಿನಲ್ಲಿ ಹೊಂಚು ಹಾಕಿ ಸಂಜೆ 6.30ರ ಸಮಯದಲ್ಲಿ ಸಂಪತ್ ಕುಮಾರ್ ಅಣತಿಯಂತೆ ಅಪಘಾತ ಉಂಟು ಮಾಡಿ ಕೊಲೆಗೈದಿರುವದಾಗಿ ಪೊಲೀಸ್ ವಿಚಾರಣೆ ಸಂದರ್ಭ ಒಪ್ಪಿಕೊಂಡಿದ್ದಾರೆ ಎಂಬ ಅಂಶವನ್ನು ಎಸ್‍ಪಿ ತಿಳಿಸಿದರು. ಆ ಹಿನ್ನೆಲೆ ದುಷ್ಕøತ್ಯಕ್ಕೆ ಬಳಸಿರುವ ಲಾರಿ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣವನ್ನು ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದೊಂದಿಗೆ ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರರಾಜ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಸಿದ್ಧಯ್ಯ, ಠಾಣಾಧಿಕಾರಿ ಚೇತನ್, ಪ್ರೊಬೆಸನರಿ ಠಾಣಾಧಿಕಾರಿ ಶ್ರವಣ್ ಹಾಗೂ ಸಿಬ್ಬಂದಿಗಳಾದ ದಿನೇಶ್, ಶಿವರಾಜ್, ರವಿ, ಅನಿಲ್, ಮಂಜುನಾಥ್, ರಾಜೇಶ್, ಗಿರೀಶ್, ಚಾಲಕರಾನ ಸುನಿಲ್, ಅರುಣ್ ತಂಡ ಬಯಲಿಗೆಳೆದಿದ್ದು, ಇಲಾಖೆಯ ಕಾರ್ಯ ಶ್ಲಾಘಿಸಿ ನಗದು ಬಹುಮಾನ ಘೋಷಿಸಿರುವದಾಗಿ ಎಸ್‍ಪಿ ಡಾ. ಸುಮನ್ ಹರ್ಷ ವ್ಯಕ್ತಪಡಿಸಿದರು.