ವರದಿ-ಚಂದ್ರಮೋಹನ್ ಕುಶಾಲನಗರ, ಮಾ. 29: ಕುಶಾಲನಗರ ಸಮೀಪ ಮನೆಯೊಂದರಲ್ಲಿ ಪತ್ತೆಯಾದ ಸ್ಪೋಟಕ ಪ್ರಕರಣದ ಬೆನ್ನಲ್ಲೇ ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಮನೆಯಲ್ಲಿ ಅಕ್ರಮವಾಗಿ ಭಾರೀ ಪ್ರಮಾಣದ ಅಪಾಯಕಾರಿ ಸ್ಪೋಟಕಗಳನ್ನು ಕುಶಾಲನಗರ ಪೊಲೀಸರು ಪತ್ತೆಹಚ್ಚಿ ಘಟನೆಗೆ ಸಂಬಂಧಿಸಿದಂತೆ ಐವರನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಹಸ್ತಾಂತರಿಸಿದ್ದಾರೆ.ಪ್ರಕರಣ ವರದಿಯಾಗುತ್ತಲೇ ದೇಶದ ವಿವಿಧ ತನಿಖಾ ಸಂಸ್ಥೆಗಳು ಮಾಹಿತಿ ಸಂಗ್ರಹಿಸಲು ತೊಡಗಿರುವದು ಶಕ್ತಿಯ ಗಮನಕ್ಕೆ ಬಂದಿದೆ. ರಿಸರ್ಚ್ ಅನಾಲಿಸಿಸ್ ವಿಂಗ್ (ರಾ) ಹಾಗೂ ಕೇಂದ್ರ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು ಸ್ಪೋಟಕಗಳನ್ನು ಯಾವ ಉದ್ದೇಶದಿಂದ ಸಂಗ್ರಹಿಸಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.ಕುಶಾಲನಗರ ವ್ಯಾಪ್ತಿಯಲ್ಲಿ ಸ್ಪೋಟಕಗಳನ್ನು ಸಂಗ್ರಹಿಸಲು ಅಧಿಕೃತವಾಗಿ ಪರವಾನಗಿ ಪಡೆದಿರುವ ಮ್ಯಾಗಜಿನ್ ರೂಂ ಇತ್ತೀಚೆಗೆ ಜಪ್ತಿ ಮಾಡಲಾಗಿದ್ದು ಈ ಬಗ್ಗೆ ಕಡತಗಳು ಮಹಾರಾಷ್ಟ್ರದ ಪುಣೆಗೆ ಸಾಗಿಸಲಾಗಿದ್ದು ವಿಚಾರಣಾ ಹಂತದಲ್ಲಿದೆ ಎನ್ನಲಾಗಿದೆ. ಈ ಮ್ಯಾಗಜಿನ್ ರೂಂನ ಸ್ಪೋಟಕ ವಸ್ತುಗಳ ಬಗ್ಗೆ ಸಮರ್ಪಕ ಮಾಹಿತಿಯ ದಾಖಲೆ ಒದಗದ ಹಿನ್ನೆಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿಗಳು ಜಪ್ತಿ ಮಾಡಿ ಕ್ರಮಕೈಗೊಂಡಿದ್ದರು. ಆದರೂ ಅಪಾಯಕಾರಿ ಡಿಟೋನೇಟರ್ಗಳು ಮತ್ತಿತರ ಸ್ಪೋಟಕ ಸಾಮಗ್ರಿಗಳು ವ್ಯಕ್ತಿಯೊಬ್ಬರ ಮನೆಯಲ್ಲಿ ಪತ್ತೆಯಾಗಿರುವದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಬಹುತೇಕ ಇಂತಹ ಸ್ಪೋಟಕ ಸಾಮಗ್ರಿಗಳನ್ನು ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿರುವ ಕಲ್ಲುಕೋರೆಗಳನ್ನು ಸ್ಪೋಟಿಸಲು ಬಳಸಲಾಗುತ್ತದೆ. ಉಳಿದಂತೆ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಬಂಡೆಗಳನ್ನು ನೆಲಸಮ ಮಾಡಲು ಉಪಯೋಗಿಸಲಾಗುತ್ತದೆ ಎಂದು ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಪರವಾನಗಿ ಇಲ್ಲದೆ ಅಕ್ರಮವಾಗಿ ದಾಸ್ತಾನಿರಿಸಿರುವದು ಅಪರಾಧವಾಗಿರುತ್ತದೆ. ಯಾವದೇ ರೀತಿಯ ವಿಧ್ವಂಸಕ ಚಟುವಟಿಕೆಗಳಿಗೆ ಇದನ್ನು ಬಳಸಲು ಸಂಗ್ರಹಿಸಿಲ್ಲ ಎನ್ನುವದು ಖಚಿತಗೊಂಡಿದೆ ಎಂದು ತಿಳಿಸಿದ್ದಾರೆ.
ಕುಶಾಲನಗರ ವ್ಯಾಪ್ತಿಯಲ್ಲಿ ಎಲ್ಲ ಕಲ್ಲುಕೋರೆಗಳು ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ಈ ಸ್ಪೋಟಕಗಳನ್ನು ಸಂಗ್ರಹಿಸಿರುವ ಉದ್ದೇಶದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಉಳಿದಂತೆ ಇದೇ ರೀತಿಯ ಸಂಗ್ರಹ ಇತರೆಡೆ ಇರುವ
(ಮೊದಲ ಪುಟದಿಂದ) ಸಾಧ್ಯತೆ ಬಗ್ಗೆ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಮೈಸೂರು,
ಹಾಸನ ವ್ಯಾಪ್ತಿಯಲ್ಲಿ ಕೂಡ ತನಿಖೆ ಕೈಗೊಳ್ಳುತ್ತಿದೆ ಎಂದಿದ್ದಾರೆ.
ಸೋಮವಾರಪೇಟೆ ವ್ಯಾಪ್ತಿಯ ಯಲಕನೂರು ಎಂಬಲ್ಲಿ ವ್ಯಕ್ತಿಯೊಬ್ಬರು ಕಲ್ಲುಕೋರೆ ನಡೆಸುತ್ತಿರುವ ಬಗ್ಗೆ ಮಾಹಿತಿಯಿದ್ದು ಇಲ್ಲಿಯ ಕೋರೆಯಲ್ಲಿ ಸ್ಪೋಟಕಗಳ ಬಳಕೆ ಬಗ್ಗೆ ಕೂಡ ವಿಚಾರಣೆ ಕೈಗೊಳ್ಳಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ತಮ್ಮ ಕಣ್ಣೆದುರೇ ಅಕ್ರಮ ಕೋರೆಗಳು ನಡೆಯುತ್ತಿದ್ದರೂ ಯಾವದೇ ರೀತಿಯ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕುಶಾಲನಗರದಲ್ಲಿ ಪತ್ತೆಯಾದ ಪ್ರಕರಣದಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಲಗನಹಳ್ಳಿ ಎಂಬಲ್ಲಿಯ ರಿಜ್ವಾನ್ ಅಹಮ್ಮದ್ ಎಂಬಾತ ಆ ವ್ಯಾಪ್ತಿಯಲ್ಲಿ ಕೋರೆಗಳನ್ನು ನಡೆಸುತ್ತಿದ್ದು, ಸ್ಪೋಟಕ ವಸ್ತುಗಳ ಸಾಗಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ ಎನ್ನುವ ದೂರುಗಳು ಕೇಳಿಬಂದಿವೆ.
ಕುಶಾಲನಗರದ ಸ್ಪೋಟಕ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬೆಟ್ಟದಪುರ ಪೊಲೀಸರು ಸೇರಿದಂತೆ ಮೈಸೂರು ಜಿಲ್ಲಾ ಪೊಲೀಸ್ ಈತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ತೊಡಗಿರುವದು ತಿಳಿದುಬಂದಿದೆ. ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರಿಜ್ವಾನ್ ಬಗ್ಗೆ ಪೂರ್ವಾಪರ ತಿಳಿಯಲಾಗುವದು ಎಂದು ಬೆಟ್ಟದಪುರ ಠಾಣೆಯ ಉಪ ಠಾಣಾಧಿಕಾರಿ ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉಳಿದಂತೆ ರವಿ ಎಂಬಾತ ಕಾಫಿ ಕ್ಯೂರಿಂಗ್ ಘಟಕವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇನ್ನೋರ್ವ ಆರೋಪಿ ಮಂಜು ಕೋರೆಗಳಿಗೆ ಸ್ಪೋಟಕ ವಸ್ತುಗಳ ಕೆಲಸ ಕಾರ್ಯಕ್ಕೆ ಟ್ರ್ಯಾಕ್ಟರ್ ಮತ್ತು ಕೆಲಸಗಾರರನ್ನು ಕಳುಹಿಸಿಕೊಡುವ ಕಾರ್ಯ ನಿರ್ವಹಿಸುತ್ತಾನೆ ಎನ್ನುವದು ಆತನ ಸಹಚರರಿಂದ ತಿಳಿದು ಬಂದಿದೆ. ಬೈಚನಹಳ್ಳಿಯ ಕುಬೇರ ಎಂಬ ಆರೋಪಿ ಕಾಟಾಚಾರಕ್ಕೆ ಆಟೋ ಚಾಲಕನಾಗಿದ್ದು ಈ ಕೋರೆ ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿಗಳು ಹೊರಬಿದ್ದಿವೆ.
ಈ ಸ್ಪೋಟಕ ವಸ್ತುಗಳು ಹಾಸನ ಅಥವಾ ಮೈಸೂರು ಭಾಗದಿಂದ ಸರಬರಾಜಾಗಿರುವ ಸಾಧ್ಯತೆಯಿದ್ದು ಇವುಗಳನ್ನು ಹೆಚ್ಚು ಹಣಕ್ಕೆ ಮಾರಾಟ ಮಾಡುವ ದಂಧೆ ಇದಾಗಿದೆ ಎನ್ನುವ ವಿಷಯ ತಿಳಿದುಬಂದಿದೆ. ಕುಶಾಲನಗರದಲ್ಲಿ ಇಂತಹ ಸ್ಪೋಟಕಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಒಂದಿಬ್ಬರು ವ್ಯಕ್ತಿಗಳು ಕೋಟ್ಯಧಿಪತಿಗಳಾಗಿರುವ ಇತಿಹಾಸವೂ ಇದೆ.
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಇತ್ತೀಚೆಗೆ ಸ್ಪೋಟಕಗಳನ್ನು ಬಳಸಿ ಗಡಿಭದ್ರತಾ ಪೊಲೀಸರ ಮಾರಣಹೋಮ ನಡೆಸಿರುವ ಘಟನೆ ಇನ್ನೂ ಹಸಿರಾಗಿರುವಾಗಲೇ ಜಿಲ್ಲೆಯ ಕುಶಾಲನಗರದಲ್ಲಿ ಸ್ಪೋಟಕ ವಸ್ತುಗಳ ಸಂಗ್ರಹ ಪತ್ತೆಯಾಗಿರುವ ಬಗ್ಗೆ ಸ್ಥಳೀಯ ಜನರಲ್ಲಿ ಪ್ರಕರಣ ಚರ್ಚೆಗೆ ಗ್ರಾಸವಾಗುವದರೊಂದಿಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಗುಪ್ತಚರ ತಂಡಗಳು ಎಚ್ಚೆತ್ತುಕೊಂಡಿರುವದು ಸದ್ಯದ ಬೆಳವಣಿಗೆಯಾಗಿದೆ.
ಕೊಡಗು ಜಿಲ್ಲೆಯ ಗಡಿಭಾಗದ ತಪಾಸಣಾ ಕೇಂದ್ರಗಳ ಮೂಲಕ ಇಂತಹ ಸ್ಪೋಟಕಗಳು ಅಕ್ರಮವಾಗಿ ಸಾಗಾಟವಾಗಿ ಜಿಲ್ಲೆಗೆ ಸರಬರಾಜಾಗಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡು ಅಕ್ರಮವಾಗಿ ಸ್ಪೋಟಕಗಳ ಮಾರಾಟ ಜಾಲದ ಮೂಲವನ್ನು ಪತ್ತೆಹಚ್ಚಬೇಕಾಗಿದೆ.