ಮಡಿಕೇರಿ, ಮಾ. 30: ಸರಕಾರಿ ಶಾಲೆಗಳ ಉಳಿವಿಗಾಗಿ ದೇಶದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕು ಹಾಗೂ ಶಿಕ್ಷಣ ಆಯೋಗದ ಶಿಫಾರಸ್ಸಿನಂತೆ ದೇಶದ ಒಟ್ಟು ಉತ್ಪನ್ನದಲ್ಲಿ ಶೇ.6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡುವ ಬಗ್ಗೆ ರಾಜಕೀಯ ಪಕ್ಷಗಳು ತಮ್ಮ ಬದ್ಧತೆಯನ್ನು ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಸಮನ್ವಯ ವೇದಿಕೆಯ ಜಿಲ್ಲಾ ಘಟಕ ಆಗ್ರಹಿಸಿದೆ.
ಶುಕ್ರವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎ. ನಾಗೇಶ್ ಅವರು, ಈ ಸಂಬಂಧವಾಗಿ ಈಗಾಗಲೇ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಚುನಾವಣಾ ಅಭ್ಯರ್ಥಿಗಳಿಗೆ ಮನವಿ ಸಲ್ಲಿಸಿ ತಮ್ಮ ಪ್ರಣಾಳಿಕೆಯಲ್ಲಿ ಇದನ್ನು ಜನರ ಕಾರ್ಯಸೂಚಿಯನ್ನಾಗಿ ಸೇರಿಸಲು ಆಗ್ರಹಿಸಲಾಗಿದೆ. ಅಲ್ಲದೆ ಅವರು ತಮ್ಮ ಬದ್ಧತೆಯನ್ನು ಪ್ರದರ್ಶಿಸುವ ಕುರಿತು ಸಹಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಶಾಲಾ ಹಂತದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ಬಲಪಡಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಮತ್ತು ಸರಕಾರಿ ಶಾಲೆಗಳನ್ನು ಸಾಮೂಹಿಕವಾಗಿ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ರಾಜಕೀಯ ಪಕ್ಷಗಳು ತಮ್ಮ ಬದ್ಧತೆಯನ್ನು ತೋರಿಸಬೇಕು.
ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ಪೂರ್ಣವಾಗಿ ನಿಯಂತ್ರಿಸಿ ಖಾಸಗಿ ಶಾಲೆಗಳು ಜನಸಾಮಾನ್ಯರಿಗೆ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಹೊಂದಿರಲು ಅನುವಾಗುವಂತೆ ಶುಲ್ಕ ನಿಯಂತ್ರಣ, ಗುಣಾತ್ಮಕ ಶಿಕ್ಷಣಕ್ಕಾಗಿ ಕನಿಷ್ಟ ಪ್ರಮಾಣಕಗಳು ಮತ್ತು ಮಾನದಂಡಗಳು ಮತ್ತು ಪೋಷಕರ ಪಾಲ್ಗೊಳ್ಳುವಿಕೆಗೆ ಪೂರಕವಾಗುವ ಸಾಂಸ್ಥಿಕ ರಚನೆಯನ್ನು ಒಳಗೊಂಡಿರುವ ಕಟ್ಟುನಿಟ್ಟಾದ ವಿಸ್ತøತ ಕಾನೂನು ರೂಪಿಸಿ ಜಾರಿಗೊಳಿಸಲು ಬದ್ಧವಾಗಿರಬೇಕು ಎಂದು ಅವರು ಆಗ್ರಹಿಸಿದರು.
ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ)ಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಈ ಕುರಿತು ಬೇಡಿಕೆಗಳನ್ನು ರಾಜಕೀಯ ಪಕ್ಷಗಳಿಗೆ ಮಂಡಿಸಿದ್ದು, ಇದನ್ನು ರಾಷ್ಟ್ರೀಯ ಆಂದೋಲನವನ್ನಾಗಿ ರೂಪಿಸಲಾಗಿದೆ. ಈ ಬೇಡಿಕೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಜನರ ಕಾರ್ಯಸೂಚಿಯನ್ನಾಗಿ ಸೇರಿಸಿ ಚುನಾವಣೆಯ ಬಳಿಕ ಅದನ್ನು ಈಡೇರಿಸುವ ರಾಜಕೀಯ ಬದ್ಧತೆಗೂ ಒತ್ತಾಯಿಸುವದಾಗಿ ಹೇಳಿದರು.