ಮಡಿಕೇರಿ, ಮಾ. 30: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಾಕಷ್ಟು ಅಭಿವೃದ್ಧಿ ಹೊಂದಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಉತ್ತಮ ಗುಣಮಟ್ಟದ ಸೌಲಭ್ಯ ನೀಡುತ್ತಿದೆ. ಉತ್ತಮ ಭವಿಷ್ಯಕ್ಕೆ ಇಂದಿನ ವಿದ್ಯಾರ್ಥಿ ಯುವಜನತೆ ಶ್ರಮವಹಿಸಬೇಕಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರು ಪ್ರೊ. ವಿ. ರವೀಂದ್ರಚಾರಿ ಅಭಿಪ್ರಾಯ ಪಟ್ಟರು.

ಎಫ್.ಎಂ.ಸಿ ಕಾಲೇಜು ಸಭಾಂಗಣದಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವದ ಪ್ರತಿಭಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲ ಯದಿಂದ ಹಲವಾರು ಶೈಕ್ಷಣಿಕ ಪ್ರೋತ್ಸಾಹ, ಗ್ರಂಥಾಲಯವನ್ನು ಅಭಿವೃದ್ಧಿಪಡಿಸಿದೆ. ಕ್ರೀಡಾಭಿವೃದ್ಧಿಗೆ ಕ್ರೀಡಾ ಸಾಮಗ್ರಿಗಳನ್ನು ನೀಡಲಾಗುತ್ತಿದೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಎಂದರು.

ಯುವ ಪ್ರತಿಭೆಗಳ ಸಾಧನೆಗೆ ವೇದಿಕೆ ಮತ್ತು ಪುರಷ್ಕಾರವನ್ನು ನೀಡುವ ಮೂಲಕ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಕೂಡ ಕಾಲೇಜಿನ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಗುರಿಯೊಂದಿಗೆ ಸಾಧನೆಯ ದೃಢ ಸಂಕಲ್ಪದಿಂದ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಲು ಶ್ರಮವಹಿಸ ಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ರೋಟರಿ ಮಾಜಿ ಗವರ್ನರ್ ರೊ. ಸುರೇಶ್ ಚಂಗಪ್ಪ ಮಾತನಾಡಿ, ವಿದ್ಯಾರ್ಥಿ ಜೀವನವೆಂಬದು ಬಂಗಾರ ದಂತೆ, ಸಂವೇದನಾ ಶೀಲತೆಯನ್ನು ಬೆಳೆಸಿಕೊಂಡು ಪರೋಪಕಾರಿಯಾಗಿ ಬದುಕು ಕಟ್ಟಿಕೊಳ್ಳುವಂತಾಗಬೇಕು. ವ್ಯಕ್ತಿತ್ವ ಮತ್ತು ಉತ್ತಮ ಕಾರ್ಯ ಪ್ರವೃತಿಯು ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು.

ಯುವ ಜನಾಂಗಕ್ಕೆ ಇಂದು ಸಾಕಷ್ಟು ಉತ್ತಮ ಅವಕಾಶಗಳಿದ್ದು ಅದರ ಸದುಪಯೋಗವನ್ನು ಪಡೆದುಕೊಂಡು ಸಮಾಜದಲ್ಲಿನ ಮೌಢ್ಯತೆ, ಅಜ್ಞಾನವನ್ನು ಹಾಗೂ ಸಾಮಾಜಿಕ ಪಿಡುಗುಗಳನ್ನು ತೊಲಗಿಸಲು ಇಂದಿನ ವಿದ್ಯಾರ್ಥಿ ಯುವ ಜನಾಂಗ ಶ್ರಮವಹಿಸಬೇಕಾಗಿದೆ ಎಂದು ತಿಳಿಸಿದರು.

ಎಫ್‍ಎಂಸಿ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ ಮಾತನಾಡಿ, ಜಗತ್ತಿನ ಶ್ರೇಷ್ಠ ವ್ಯಕ್ತಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಸಾಧಿಸಿ ಸಂಪನ್ಮೂಲ ವ್ಯಕ್ತಿಯಾಗಿ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಇಂದಿನ ವಿದ್ಯಾರ್ಥಿ ಯುವ ಜನತೆಯು ಆದರ್ಶ ವ್ಯಕ್ತಿಗಳಾಗಲು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಪ್ರತಿಭೋತ್ಸವದಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಶೈಕ್ಷಣಿಕ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆಯನ್ನು ಮಾಡಿದ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.

ಸಮಾರಂಭದಲ್ಲಿ ಎಫ್‍ಎಂಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ, ಡಾ. ಎ.ಎನ್. ಗಾಯತ್ರಿ, ಡಾ. ಈ. ತಿಪ್ಪೇಸ್ವಾಮಿ ವಿವಿಧ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಹಾಜರಿದ್ದರು. ಎಂ.ಎನ್. ರವಿಶಂಕರ್ ಸ್ವಾಗತಿಸಿದರು, ಗೌತಮಿ ವಂದಿಸಿದರು.