ಕುಶಾಲನಗರ, ಮಾ. 30: ಪ್ರಸಕ್ತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶ್ರದ್ಧೆ, ಬದ್ಧತೆಯ ಜೊತೆಗೆ ಕ್ರಿಯಾಶೀಲರಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಲ್ಲಿ ಮಾತ್ರ ತಮ್ಮ ಗುರಿ ಸಾಧಿಸಲು ಸಾಧ್ಯ ಎಂದು ಮಡಿಕೇರಿಯ ಎಫ್.ಎಂ.ಸಿ. ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ.ಡಿ. ತಿಮ್ಮಯ್ಯ ಅಭಿಪ್ರಾಯಿಸಿದರು.

ಹೋಬಳಿಯ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ತೆರೆದ ಮನೆ’ ಮತ್ತು ಜ್ಞಾನ ಕಾವೇರಿ ಕ್ಯಾಂಪಸ್ ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನ ಎಂಬದು ಅಮೂಲ್ಯವಾಗಿದೆ. ಉತ್ತಮ ಕನಸನ್ನು ಹೊಂದಿ ಅದನ್ನು ಈಡೇರಿಸಿಕೊಳ್ಳುವಲ್ಲಿ ನಿರಂತರ ಪರಿಶ್ರಮ ವಹಿಸಬೇಕು. ವ್ಯಕ್ತಿತ್ವ ನಿರ್ಮಾಣಕ್ಕೆ ಎಲ್ಲಾ ರೀತಿಯ ಮಾರ್ಗದರ್ಶನ ಪಡೆಯುವದ ರೊಂದಿಗೆ ಸರ್ವಾಂಗೀಣ ಬೆಳವಣಿಗೆ ಯಾಗಲು ಸಾಧ್ಯವಿದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.

ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ. ಕೆ.ಸಿ. ಪುಷ್ಪಲತಾ ಮಾತನಾಡಿ, ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಆಧುನೀಕೃತ ಪ್ರಯೋಗಾಲಯ, ಅಂತರ್ ಕಾಲೇಜು ಕ್ರೀಡಾ ಚಟುವಟಿಕೆಗಳು, ವಿದ್ಯಾರ್ಥಿನಿಲಯ, ಕ್ಯಾಂಟೀನ್ ಹಾಗೂ ವಾಹನ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗಿದೆ. ಹಾಗೆಯೇ ಸುರಕ್ಷತೆಯ ದೃಷ್ಟಿಯಿಂದ ಅತ್ಯಾಧುನಿಕ ಸಿಸಿ ಕ್ಯಾಮೆರಾಗಳನ್ನು ಕೂಡ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣ ಭವಿಷ್ಯಕ್ಕಾಗಿ ಅಳುವಾರದ ಸ್ನಾತಕೋತ್ತರ ಕೇಂದ್ರದ ಸದುಪ ಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಬಾರ ನಿರ್ದೇಶಕಿ ಪ್ರೊ. ಮಂಜುಳಾ ಶಾಂತರಾಮ್ ಅವರು, ಕೊಡಗು, ದಕ್ಷಿಣ ಕನ್ನಡ, ಹಾಸನ ಹಾಗೂ ಮೈಸೂರು ಇನ್ನಿತರೆ ಜಿಲ್ಲೆಗಳ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿಭಾಗವಾರು ಸಂಬಂಧಪಟ್ಟಂತೆ ಕೆಲವು ಪಠ್ಯೇತರ ಚಟುವಟಿಕೆ, ಸ್ಪರ್ಧೆಗಳನ್ನು ಹಾಗೂ ವಿದ್ಯಾರ್ಥಿಗಳ ಗಮನ ಸೆಳೆಯುವಂತಹ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ವಿದ್ಯಾರ್ಥಿಗಳು ಕ್ಯಾಂಪಸ್‍ಗೆ ನೇರವಾಗಿ ಭೇಟಿ ನೀಡಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವದರ ಜೊತೆಗೆ ಸಂಸ್ಥೆಯಲ್ಲಿ ಲಭ್ಯವಿರುವ ವಿವಿಧ ವಿಭಾಗಗಳಲ್ಲಿನ ಶೈಕ್ಷಣಿಕ ಸೌಲಭ್ಯಗಳು, ಸಂಶೋಧನೆ, ನೂತನವಾಗಿ ಪ್ರಾರಂಭವಾಗುತ್ತಿರುವ ಕೋರ್ಸ್‍ಗಳ ವಿವರ ಹಾಗೂ ಸ್ನಾತಕೋತ್ತರ ಪ್ರವೇಶಾತಿ ಸೇರಿದಂತೆ ಇನ್ನಿತರೆ ಎಲ್ಲಾ ಮಾಹಿತಿಗಳನ್ನು ಪಡೆದು ಕೊಳ್ಳುವದಕ್ಕೆ ಅನುಕೂಲವಾಗಲಿದೆ. ಲಭ್ಯವಿರುವ ವಿವಿಧ ಸ್ನಾತಕೋತ್ತರ ಕೋರ್ಸ್‍ಗಳನ್ನು ಅಧ್ಯಯನ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು, ಯಾವದೇ ವಿಭಾಗಗಳಿಗೆ ನೇರವಾಗಿ ಭೇಟಿ ನೀಡಿ, ಅಲ್ಲಿನ ಬೋಧಕ ವೃಂದದೊಂದಿಗೆ ನೇರ ಸಮಾಲೋಚನೆ ನಡೆಸಿ ತಮಗೆ ಸೂಕ್ತವೆನಿಸಿದ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವದಕ್ಕೆ ಸಹಕಾರಿ ಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎನ್‍ಎಸ್‍ಎಸ್ ಸಂಚಾಲಕ ಡಾ. ಚಂದ್ರಶೇಖರ ಜಿ. ಜೋಷಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ಕೆ.ಕೆ. ಧರ್ಮಪ್ಪ, ಎಸ್‍ಸಿ-ಎಸ್ಟಿ ಕೋಶದ ಸಂಚಾಲಕ ರಾಜಕುಮಾರ್ ಮೇಟಿ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಐ.ಕೆ. ಮಂಜುಳಾ, ಬಿ.ಎಸ್. ಶ್ರೀನಾಥ್, ವಿವಿಧ ವಿಭಾಗಗಳ ಪ್ರಾಧ್ಯಾಪಕ ವೃಂದ, ಉಪನ್ಯಾಸಕರ ವೃಂದ, ಆಡಳಿತ ವೃಂದ, ತಾಂತ್ರಿಕ ವೃಂದ, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳ ವೃಂದ, ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಪದವಿ ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆ ಯನ್ನು ವಿದ್ಯಾರ್ಥಿನಿ ಪೂಜಾ, ಸ್ವಾಗತವನ್ನು ದೈಹಿಕ ಉಪನಿರ್ದೇಶಕ ಡಾ. ಟಿ. ಕೇಶವಮೂರ್ತಿ, ವಂದನಾರ್ಪಣೆ ಯನ್ನು ಡಾ. ಕೆ.ಎಸ್. ಚಂದ್ರಶೇಖರಯ್ಯ ಹಾಗೂ ಉಪನ್ಯಾಸಕ ಜûಮೀರ್ ಅಹಮದ್ ನಿರೂಪಿಸಿದರು.