ಮಡಿಕೇರಿ, ಮಾ. 30: ಸಂಪಾಜೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿ ಸೆರೆಮನೆಗೆ ಕಳುಹಿಸಿದ್ದಾರೆ. ಈ ನಡುವೆ ಮೃತ ಬಾಲಚಂದ್ರ ಕಳಗಿ ಪತ್ನಿ ರಮಾದೇವಿ ಗ್ರಾಮಾಂತರ ಠಾಣೆಯಲ್ಲಿ ಮತ್ತೊಂದು ದೂರು ಸಲ್ಲಿಸಿದ್ದಾರೆ.ತನ್ನ ಪತಿಯ ಸಾವಿನ ಹಿಂದೆ ಸಂಪಾಜೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿ ಹಾಗೂ ಆಕೆಯ ಪತಿ ಲಾರಿ ಚಾಲಕನ ಪಾತ್ರದ ಬಗ್ಗೆ ರಮಾ ಶಂಕೆ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆಯಬೇಕೆಂದು ಭಿನ್ನವಿಸಿದ್ದಾರೆ. ಇದುವರೆಗೆ ಜಿಲ್ಲಾ ಪೊಲೀಸರು ಈ ದಂಪತಿಯ ಪಾತ್ರವನ್ನು ಕಳಗಿ ಕೊಲೆ ಸಂಬಂಧ ನಿರಾಕರಿಸಿದ್ದರಾದರೂ, ಮೃತರ ಪತ್ನಿ ನೀಡಿರುವ ದೂರಿನ ಕುರಿತು ತನಿಖೆಗೆ ಮುಂದಾಗಿದ್ದಾರೆ.

ಬಾಲಚಂದ್ರ ಕಳಗಿ ಸಾವನ್ನಪ್ಪಿದ್ದ ಬೆನ್ನಲ್ಲೇ ಮೃತರ ಚಿಕ್ಕಪ್ಪ ರಾಜಾರಾಮ ಕಳಗಿ ಸಲ್ಲಿಸಿದ್ದ ದೂರಿನ ಮೇರೆಗೆ, ಈ ಮೊದಲು ಸಂಪಾಜೆ ಉಪಠಾಣೆಯಲ್ಲಿ ಶಂಕಿತ ದಂಪತಿಯನ್ನು ಕರೆಸಿ ವಿಚಾರಣೆ ನಡೆಸಿದ್ದ ಪೊಲೀಸರು ಇಬ್ಬರಿಂದ ಪ್ರತ್ಯೇಕ ಹೇಳಿಕೆ ಪಡೆದುಕೊಂಡಿದ್ದರು. ಈ ವೇಳೆ ತಾ. 19 ರಂದು ಬಾಲಚಂದ್ರ ಕಳಗಿ ಹಾಗೂ ದಂಪತಿ ಅರಸಿಕಟ್ಟೆಗೆ ಹೋಗಿ ಬಂದಿದ್ದ ಸಂಗತಿ ಬಹಿರಂಗಗೊಂಡಿತ್ತು.ಅಲ್ಲದೆ ಬಾಲಚಂದ್ರ ಕಳಗಿ ಹಾಗೂ ತಮ್ಮ ಕುಟುಂಬಕ್ಕೆ ಅನ್ಯೋನ್ಯ ಸಂಬಂಧವಿದ್ದುದಾಗಿಯೂ, ಆ ಕಾರಣದಿಂದ ಒಟ್ಟಿಗೆ ಅರಸಿಕಟ್ಟೆಗೆ ಹೋಗಿ ಪೂಜೆ ಸಲ್ಲಿಸಿ ವಾಪಾಸಾಗುವ ವೇಳೆ ರಸ್ತೆ ಅಪಘಾತ ಸಂಭವಿಸಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಲ್ಲದೆ, ಮೂರ್ನಾಡುವಿನ ಪೀಠೋಪಕರಣ ಮಳಿಗೆಗೆ ಆ ಮುನ್ನ ಭೇಟಿ ನೀಡಿದ್ದಾಗಿ ಸುಳಿವು ಲಭಿಸಿತ್ತು. ಅಂತೆಯೇ ಪೊಲೀಸರು ಈ ದಂಪತಿಯನ್ನು ಪ್ರಕರಣದಿಂದ ಹೊರತುಪಡಿಸಿದ್ದರು.

ಮತ್ತಷ್ಟು ಶಂಕೆ: ಈ ನಡುವೆ ರಮಾದೇವಿ ನೀಡಿರುವ ದೂರಿನಲ್ಲಿ ಈ ದಂಪತಿಗೆ ತನ್ನ ಪತಿ ಸಾಕಷ್ಟು ಆರ್ಥಿಕ ನೆರವಿನೊಂದಿಗೆ, ಭಾರೀ ಮೊತ್ತದ ಬ್ಯಾಂಕ್ ಸಾಲ ಇತ್ಯಾದಿ ಕಲ್ಪಿಸಿರುವ ಶಂಕೆ ವ್ಯಕ್ತಪಡಿಸಿ ಆ ದಿಕ್ಕಿನಲ್ಲಿ ತನಿಖೆಯೊಂದಿಗೆ ಸತ್ಯಾಂಶ ಬಯಲಿಗೆಳೆಯುವಂತೆ ಬೇಡಿಕೆ ಇರಿಸಿದ್ದಾರೆ.

ಕಾರಿಗೂ ಸಾಲ: ಇನ್ನೊಂದೆಡೆ ಹಾಲೀ ದಂಪತಿ ಹೊಂದಿರುವ ಹೊಸ ಕಾರು ಮತ್ತು ನೂತನ ಬಂಗಲೆಗೆ ಸುಳ್ಯದ ಪ್ರತಿಷ್ಠಿತ ಬ್ಯಾಂಕ್‍ನಿಂದ ಭಾರೀ ಮೊತ್ತದ ಸಾಲವನ್ನು ತನ್ನ ಪತಿ ಕೊಡಿಸಿರುವ ಶಂಕೆ ವ್ಯಕ್ತಪಡಿಸಿರುವ ರಮಾ, ಈ ಎಲ್ಲ ಸಂಶಯಗಳ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮೊಬೈಲ್ ಪರಿಶೀಲನೆ: ಈ ನಡುವೆ ಬಾಲಚಂದ್ರ ಕಳಗಿ ಬಳಸುತ್ತಿದ್ದ ಎರಡು ಮೊಬೈಲ್‍ಗಳನ್ನು ಪರಿಶೀಲಿಸಿರುವ ಪೊಲೀಸರಿಗೆ ಮೇಲ್ನೋಟಕ್ಕೆ ಯಾವದೇ ಸುಳಿವು ಕೂಡ ಲಭ್ಯವಾಗಿಲ್ಲವೆನ್ನಲಾಗಿದೆ.

ಅವರೇ ಸೂತ್ರದಾರರು: ತಾ. 19 ರಂದು ಕಳಗಿ ಹತ್ಯೆಯಲ್ಲಿ ಭಾಗಿಯಾಗಿರುವ ಕೆ. ಪ್ರಸಾದ್ ಹಾಗೂ ಚೆಂಬುವಿನ ಸಂಪತ್ ನೇರ ಸೂತ್ರದಾರರೆಂದು ದೃಢಪಟ್ಟಿರುವದಾಗಿ ತನಿಖಾಧಿಕಾರಿಗಳು ಖಚಿತಪಡಿಸಿದ್ದಾರೆ. ಸ್ವತಃ ಸಂಪತ್ ಬಾಲಚಂದ್ರ ಕಳಗಿಯ ಕಾರನ್ನು ಹಿಂಬಾಲಿಸಿಕೊಂಡು ತನ್ನ ಕಾರಿನಲ್ಲಿ ಮಡಿಕೇರಿಗೆ ಬಂದಿದ್ದಾಗಿದೆ. ಇಲ್ಲಿನ ಸುದರ್ಶನ ವೃತ್ತ ಬಳಿ ಕಳಗಿ ಕಾರು ನಿಲ್ಲಿಸಿ ಅರಸಿಕಟ್ಟೆಗೆ ಸಂಪಾಜೆ ದಂಪತಿಯ ವಾಹನದಲ್ಲಿ ತೆರಳಿದ್ದಾರೆ.

ಹೀಗಾಗಿ ಅವರು ಹಿಂತಿರುಗಿ ಬಂದು ಕಾರು ಕೊಂಡೊಯ್ಯುವ ತನಕವೂ ಆರೋಪಿ ಅಲ್ಲಿಯೇ ಹೊಂಚು ಹಾಕುತ್ತಾ ಇದ್ದಿದ್ದು ಸಿಸಿ ಕ್ಯಾಮರಾಗಳಿಂದ ಸುಳಿವು ಲಭಿಸಿದೆ. ಅಲ್ಲದೆ ಸುಫಾರಿ ಪಡೆದಿದ್ದ ಲಾರಿಯ ಚಾಲಕ ಜಯ ಮದೆನಾಡು ಬಳಿ ಕಾಯುತ್ತಿದ್ದದ್ದು ಬೆಳಕಿಗೆ ಬಂದಿದೆ. ಅರಸಿಕಟ್ಟೆಯಿಂದ ಹಿಂತಿರುಗಿದ ಕಳಗಿ ಮಂಗಳೂರು ರಸ್ತೆಯಲ್ಲಿ ಸಾಗದೆ ಮೂರ್ನಾಡುವಿನ ಮಾರ್ಗದಲ್ಲಿ ತೆರಳಿದ್ದಾರೆ.

ಈ ಸಂದರ್ಭ ಕಸಿವಿಸಿಗೊಂಡಿರುವ ಸಂಪತ್ ಲಾರಿ ಚಾಲಕ ಜಯನಿಗೆ ಸ್ಥಳ ಬದಲಾಯಿಸಿ ಕೊಲೆಗೆ ಹೊಂಚು ಹಾಕುತ್ತಿದ್ದದ್ದು ಪರಸ್ಪರ ಮೊಬೈಲ್ ಸಂಭಾಷಣೆಯಲ್ಲಿ ಗೋಚರಿಸಿದೆ. ಕಳಗಿ ಕೊಲೆಯಾಗಿರುವದು ಖಾತರಿಗೊಂಡ ಬಳಿಕ ಸಂಪತ್ ತನ್ನ ಮೊಬೈಲ್ ‘ಸಿಮ್’ ತೆಗೆದು ಮಂಗಳೂರು ಹೆದ್ದಾರಿಯ 2ನೇ ಮೊಣ್ಣಂಗೇರಿ ತಿರುವೊಂದರಲ್ಲಿ ಎಸೆದು ಪರಾರಿಯಾಗಿದ್ದಾನೆ. ಇತ್ತ ಜಯ ಬೇರೆಯವರ ಸಹಾಯ ಪಡೆದು ಬೊಳ್ಳ್ಳೂರು ಗ್ರಾಮದ ಮನೆ ಸೇರಿಕೊಂಡಿದ್ದಾನೆ.