ಸಿದ್ದಾಪುರ, ಮಾ. 30: ಪಕ್ಷಿಗಳಿಗೆ ನೀರುಣಿಸಲು ಮಡಿಕೇರಿಯಲ್ಲಿ ನೀರು ಇಡುವ ಮೂಲಕ ವಿಶಿಷ್ಟವಾಗಿ ವಿಶ್ವ ಜಲ ದಿನಾಚರಣೆಯನ್ನು ಮಾಡಲಾಯಿತು.

ನೆಲ್ಲಿಹುದಿಕೇರಿ ದಾರುಸ್ಸಲಾಂ ಮದ್ರಸ ಆವರಣದಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡ ವಿಶ್ವ ಜಲ ದಿನಾಚರಣೆಯನ್ನು ಮಸೀದಿಯ ಖತೀಬ್ ಹನೀಫ್ ಪ್ಯೆಝಿ ಉದ್ಘಾಟಿಸಿ ಮಾತನಾಡಿ, ನೀರನ್ನು ಮಿತವಾಗಿ ಬಳಸುವ ಮೂಲಕ ಜೀವ ಜಲದ ಮಹತ್ವ ತಿಳಿದುಕೊಳ್ಳಬೇಕೆಂದರು.

ಮದ್ರಸ ಅಧ್ಯಾಪಕ ತಂಮ್ಲಿಕ್ ಧಾರಿಮಿ ಮಾತನಾಡಿ ಪರಿಸರ ಮತ್ತು ಜಲ ಸಂಪನ್ಮೂಲಗಳ ನಾಶದಿಂದ ಕುಡಿಯುವ ನೀರಿನ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ.

ನೀರಿನ ಮಿತ ಬಳಕೆ ಕಡ್ಡಾಯ ಎಂಬ ನಿಯಮ ಜಾರಿಯಾದರೆ ಮಾತ್ರ ಮುಂದಿನ ಪೀಳಿಗೆಗೆ ಶುದ್ಧ ಕುಡಿಯುವ ನೀರನ್ನು ಉಳಿಸಲು ಸಾದ್ಯ. ಪ್ರಪಂಚದ 16 ಕೋಟಿ ಜನರಿಗೆ ಶುದ್ಧವಾದ ಕುಡಿಯುವ ನೀರಿನ ಕೊರತೆ ಈಗಾಗಲೇ ಉದ್ಭವಿಸಿದೆ.

ಬಾಯಾರಿದವನಿಗೆ ನೀರುಣಿಸುವದಕ್ಕಿಂತ ಮಿಗಿಲಾದ ದಾನ ಮತ್ತೊಂದಿಲ್ಲ ಎಂಬ ಪ್ರವಾದಿ ವರ್ಯರ ಹೇಳಿಕೆಯಿಂದ ನಾವೆಲ್ಲರೂ ನೀರಿನ ಪ್ರಾಮುಖ್ಯತೆ ತಿಳಿಯಬೇಕಿದೆ ಎಂದರು.

ಕೆಸಿಎಲ್ ಸಮಿತಿಯ ಪ್ರಮುಖ ಎಂ.ಎ. ಅಜೀಜ್ ಮಾತನಾಡಿ, ಜಿಲ್ಲೆಯಲ್ಲಿ ಕಾವೇರಿ ನದಿ ಹರಿಯುತ್ತಿದ್ದರೂ, ಕುಡಿಯುವ ನೀರಿಲ್ಲದೆ ಪರಿತಪಿಸುವಂತಾಗಿದೆ.

ನದಿಯ ಜೀವಜಲಕ್ಕೆ ಕುತ್ತು ತರುವಂಥ ಕೆಲಸ ಹಲವೆಡೆ ನಡೆಯುತ್ತಿದ್ದು ಕಾವೇರಿ ನದಿಗೆ ತ್ಯಾಜ್ಯದ ನೀರುಗಳನ್ನು ಹರಿಬಿಡಲಾಗುತ್ತಿದೆ. ಇದರ ಪರಿಣಾಮವಾಗಿ ಕಾವೇರಿ ನದಿ ನೀರನ್ನು ಪ್ರಾಣಿಗಳು ಹಾಗೂ ಮನುಷ್ಯರು ಬಳಸಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾವೇರಿ ನದಿಯನ್ನು ಸಂರಕ್ಷಿಸುವ ಮೂಲಕ ಪ್ರತಿಯೊಬ್ಬರೂ ಪಣ ತೊಡಬೇಕಾಗಿದೆ ಎಂದರು.

ನೀರು ದೇವರ ವರ, ಅದನ್ನು ಮಿತವಾಗಿ ಬಳಸುತ್ತೇನೆ ಮತ್ತು ಇತರರಿಗೂ ಮಿತ ಬಳಕೆ ಮಾಡುವಂತೆ ತಿಳಿಸುತ್ತೇನೆ. ಅರಣ್ಯ ನಾಶದಿಂದ ನೀರಿನ ಕೊರತೆ ಎದುರಾಗಿರುವ ಈ ಸಂದರ್ಭದಲ್ಲಿ ಅರಣ್ಯ, ಪರಿಸರ ಮತ್ತು ನೀರನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ.

ನೀರಿನ ಮಹತ್ವ ಅರಿತು ಅದರ ಸಂರಕ್ಷಣೆಗಾಗಿ ನಾನು ಪಣ ತೊಡುತ್ತೇನೆ ಎಂಬದಾಗಿ ದಾರುಸ್ಸಲಾಂ ಮದ್ರಸ ವಿದ್ಯಾರ್ಥಿಗಳು ಸತ್ಯ ಪ್ರತಿಜ್ಞೆ ಕೈಗೊಂಡರು.

ಈ ಸಂದರ್ಭ ಜಮಾಅತ್ ಕಾರ್ಯದರ್ಶಿ ಅಶ್ರಫ್ ಹಾಜಿ, ಎಸ್‍ಕೆಎಸ್‍ಬಿವಿ ರಾಜ್ಯ ಸಮಿತಿ ಸದಸ್ಯ ಫರ್ಹಾನ್, ಪ್ರಮುಖರಾದ ಮಹಮ್ಮದ್ ಆಲಿ ಮೌಲವಿ, ಸೈದಲವಿ, ನಾಸೀರ್ ಧಾರಿಮಿ, ರಜಾಕ್, ನಿಜಾಮ್ ಇತರರು ಇದ್ದರು.