ಮಡಿಕೇರಿ, ಮಾ. 30: ಏಷ್ಯನ್ ಥ್ರೋಬಾಲ್ ಫೆಡರೇಷನ್ ಹಾಗೂ ಥ್ರೋಬಾಲ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಬೆಂಗಳೂರಿನಲ್ಲಿ ಜರುಗಿದ ನಾಲ್ಕು ರಾಷ್ಟ್ರಗಳ ಸೌತ್ ಏಷ್ಯನ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾರತ ತಂಡ ಉತ್ತಮ ಸಾಧನೆಯೊಂದಿಗೆ ಪ್ರಶಸ್ತಿಗೆ ಭಾಜನವಾಗಿದೆ. ಪುರುಷ ಹಾಗೂ ಮಹಿಳೆಯರ ಎರಡೂ ವಿಭಾಗದಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ, ಬಾಂಗ್ಲಾದೇಶ, ಮಲೇಷಿಯಾ ಹಾಗೂ ನೇಪಾಳ ದೇಶಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದವು. ಭಾರತ ಮಹಿಳೆಯರ ತಂಡದಲ್ಲಿ ಕೊಡಗಿನ ಆಟಗಾರ್ತಿ ಬೊಪ್ಪಂಡ ರೀಮಾ ಅಪ್ಪಚ್ಚು ಅವರು ಆಟವಾಡಿದ್ದು, ಉತ್ತಮ ಆಟದ ಪ್ರದರ್ಶನ ನೀಡುವದರೊಂದಿಗೆ ತಂಡದ ಜಯದಲ್ಲಿ ಇವರೂ ಕಾರಣೀಬೂತರಾಗಿದ್ದಾರೆ. ಅಂತಿಮ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಬಾಂಗ್ಲಾದೇಶವನ್ನು 2-0 ನೇರ ಸೆಟ್ಗಳಿಂದ ಪರಾಭವಗೊಳಿಸಿ ಪ್ರಶಸ್ತಿ ಗಳಿಸಿದೆ.